Sunday, January 19, 2025
Sunday, January 19, 2025

ಸ್ವಾತಂತ್ರ್ಯತೆ ಸಾರುವ ಸ್ವಾತಂತ್ರ್ಯೋತ್ಸವ

ಸ್ವಾತಂತ್ರ್ಯತೆ ಸಾರುವ ಸ್ವಾತಂತ್ರ್ಯೋತ್ಸವ

Date:

ಸ್ವಾತಂತ್ರ್ಯ ಪ್ರತಿಯೊಂದು ಜೀವ ಸಂಕುಲ ಬಯಸುವ ಒಂದು ಸಮಯ. ಮನುಷ್ಯನಿಂದ ಆರಂಭವಾಗಿ ಪ್ರಾಣಿ – ಪಕ್ಷಿಗಳು ತಮ್ಮ ಸ್ವಾತಂತ್ರ್ಯಕ್ಕಾಗಿ ಹಾತೊರೆಯುತ್ತಿರುತ್ತವೆ. ಪಂಜರದಲ್ಲಿ ಇದ್ದ ಗಿಳಿ ಬಂಧನದಿಂದ ಮುಕ್ತವಾಗುವಂತೆ, ಬಲೆಯಲ್ಲಿದ್ದ ಮೀನು, ಸರಪಳಿಯಲ್ಲಿ ಬಂಧಿಯಾದ ಆನೆ, ಮೇಲ್ವರ್ಗದ ಶೋಷಣೆಯಲ್ಲಿರುವ ಬಡವ, ಜೈಲಿನಲ್ಲಿರುವ ಖೈದಿ ಹೀಗೆ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಸ್ವಾತಂತ್ರ್ಯಕ್ಕಾಗಿ
ಚಡಪಡಿಸಿರುತ್ತಾರೆ.

75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಇಡೀ ದೇಶವೇ ಹುಮ್ಮಸ್ಸಿನಲ್ಲಿದೆ. ಪರಕೀಯರ ಮುಷ್ಠಿಯಿಂದ ಬಿಡುಗಡೆಗೊಂಡು ಭಾರತ ಸ್ವತಂತ್ರವಾದ ದಿನಕ್ಕೆ ಅಮೃತ ಮಹೋತ್ಸವದ ಸಂಭ್ರಮ. ಮನೆ ಮನೆಯಲ್ಲಿ ತಿರಂಗ ಧ್ವಜ, ಅಲ್ಲಲ್ಲಿ ಸಾಹಿತ್ಯಿಕ- ಸಾಂಸ್ಕೃತಿಕ ಕಾರ್ಯಕ್ರಮ, ಒಟ್ಟಿನಲ್ಲಿ ಭಾರತ ದೇಶದ ಜನರಿಗೊಂದು ಜಾತಿ- ಮತ- ಭೇದವಿಲ್ಲದೆ ಎಲ್ಲರೂ ಗರ್ವದಿಂದ ಸಂಭ್ರಮದಿಂದ ಜೊತೆಯಾಗಿ ಆಚರಿಸುವ ಹಬ್ಬ ಅದುವೇ ಸ್ವಾತಂತ್ರ್ಯೋತ್ಸವ. ಇದು ನಮ್ಮ ಕರ್ತವ್ಯವೂ ಹೌದು.

ನಮ್ಮ ಪೂರ್ವಜರ ಪರಿಶ್ರಮ ಬಲಿದಾನ ತ್ಯಾಗದ ಫಲವಾಗಿ ನಾವಿಂದು ಸ್ವತಂತ್ರರಾಗಿದ್ದೇವೆ. ಕೆಲವೊಂದು ಹೋರಾಟಗಾರರು ತಮ್ಮ ಬದುಕನ್ನೇ ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟಿದ್ದನ್ನು ನಾವು ಸ್ಮರಿಸುವ ಕೆಲಸ ಮಾಡಬೇಕು. ಸ್ವಾತಂತ್ರ್ಯ ದೊರಕಿಸಿ ಕೊಡುವ ಮೂಲಕ ಭಾರತದ ಸ್ಥಿತಿಗತಿ ಬದಲಾಗಿ ಭಾರತೀಯ ಆರ್ಥಿಕ ವ್ಯವಸ್ಥೆ ಜೊತೆಗೆ ಎಲ್ಲ ರೀತಿಯಿಂದಲೂ ಅಭಿವೃದ್ಧಿ ಹೊಂದುತ್ತಾ ಹೋಗಿ ವಿಶ್ವದಲ್ಲಿ ಭಾರತಕ್ಕೆ ತನ್ನದೇ ಆದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿ ಎಲ್ಲ ರಾಷ್ಟ್ರಗಳು ಭಾರತದತ್ತ ಮುಖಮಾಡಿ ನಿಲ್ಲುವಂತೆ ಬೆಳೆದಿದೆ, ಬೆಳೆಯುತ್ತಿದೆ. ಇದು ನಮ್ಮ ಪೂರ್ವಜರು ನಮಗಾಗಿ ಜೀವ ನೀಡಿ, ರಕ್ತ ಚೆಲ್ಲಿ ಹೋರಾಟದ ಫಲದಿಂದಾಗಿ.

ಸ್ವಾತಂತ್ರ್ಯದ ನಂತರ ಹಾಗೂ ಪೂರ್ವದ ಸ್ಥಿತಿಯನ್ನು ಅವಲೋಕಿಸಿದಾಗ ಭಾರತದಲ್ಲಿ ಹಲವಾರು ಬದಲಾವಣೆಗಳು ಆಗಿವೆ. ಪರಕೀಯರ ದಾಸ್ಯದಿಂದ ನಮ್ಮನ್ನು ಮುಕ್ತಿಗೊಳಿಸಿ ಸ್ವಾತಂತ್ರ್ಯಕ್ಕಾಗಿ ನಾವೆಲ್ಲರೂ ಒಂದೇ ಎನ್ನುವ ಭಾವನೆಯಲ್ಲಿ ಬದುಕುವ ಪಣ ತೊಡಬೇಕಾಗಿದ್ದ ನಾವುಗಳು ಎಲ್ಲೋ ಒಂದು ಕಡೆ ಎಡವುತ್ತಿದ್ದೇವೆ.

ನಾರಾಯಣ ಗುರುಗಳ ಸಂದೇಶದಂತೆ ಒಂದೇ ಜಾತಿ ಒಂದೇ ಮತ ಒಂದೇ ಧರ್ಮ ಎಂದು ಸಹಬಾಳ್ವೆ ಜೀವನ ನಡೆಸುವ ಬದಲು ರಾಜಕೀಯ ಲಾಭಕ್ಕೋ ವೈಯಕ್ತಿಕ ದ್ವೇಷಕ್ಕೋ, ಅಂತಸ್ತಿನ ಅಹಂಕಾರಕ್ಕೋ ನಮ್ಮ ನಮ್ಮ ಒಳಗೆ ಕಿತ್ತಾಡಿಕೊಳ್ಳುತ್ತಿದ್ದೇವೆ. ಜಾತಿ – ಜಾತಿ ನಡುವೆ ಕಲಹ, ಧರ್ಮಗಳ ನಡುವೆ ಸಂಘರ್ಷ, ಸಿರಿವಂತನಿಂದ ಬಡವನ ಮೇಲೆ ದಬ್ಬಾಳಿಕೆ ಇಂದು ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಗೋಚರಿಸುತ್ತದೆ. ಭಾರತದ ಈ ದೌರ್ಬಲ್ಯವನ್ನು ಉಪಯೋಗಿಸಿಕೊಂಡು ಮಧ್ಯದಲ್ಲಿ ಕಡ್ಡಿ ತೂರಿಸುತ್ತಿರುವುದಕ್ಕೆ ಕೆಲವೊಂದು ದೇಶಗಳು ಹೊಂಚು ಹಾಕುತ್ತಿರುವುದು ನಮ್ಮ ಕಣ್ಣ ಮುಂದೆ ಹಲವು ನಿದರ್ಶನಗಳಿವೆ. ಇದಕ್ಕೆ ನಾವು ಅವಕಾಶ ಮಾಡಿಕೊಡಬೇಕೆ?

ಜಾತಿ, ಮತ ಧರ್ಮ ಎನ್ನದೇ ಎಲ್ಲರ ಹೋರಾಟದ ಫಲವಾಗಿಯೇ ನಾವು 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದೇವೆ ಎನ್ನುವುದನ್ನು ಮರೆಯದೇ ನಮ್ಮ ದೇಶ ಒಗ್ಗಟ್ಟಿನ ಪ್ರತಿಬಿಂಬವಾಗಿ ಇತರ ದೇಶಗಳಿಗೆ
ಮಾದರಿಯಾಗಬೇಕು. ನಾವೆಲ್ಲರೂ ಒಂದೇ ಎನ್ನುವ ಭಾವನೆ ಪ್ರತಿ ಮನುಕುಲದಲ್ಲಿ ಗೋಚರಿಸಿ ಅಧರ್ಮದ ಹಾದಿ ತುಳಿಯುವುದು ನಿಲ್ಲಬೇಕು.

ಹಿರಿಯರು ಬಯಸಿದ ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ದೇಶ ಇಂದು ಮುಂದು ಎಂದೆಂದೂ ಆಗಬೇಕು. 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿರುವ ನಾವು ಈ ಸಂಭ್ರಮಕ್ಕೆ ಕಾರಣರಾದ ಪ್ರತಿಯೊಬ್ಬರನ್ನು ಸ್ಮರಿಸುತ್ತಾ, ಗೌರವಿಸುತ್ತಾ ಬಾಳಿ ಬದುಕೋಣ.

-ಪ್ರಶಾಂತ್ ಸೂರ್ಯ ಸಾಯ್ಬ್ರಕಟ್ಟೆ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಾನವೀಯ ಮೌಲ್ಯಗಳೇ ವಿವೇಕಾನಂದರ ತತ್ವ: ಡಾ. ನಿಕೇತನ

ಉಡುಪಿ, ಜ.18: ಶಾಂತಿ ಮತ್ತು ಪ್ರೀತಿಯ ಮೂಲಕ ಮಾನವ ಜನಾಂಗ ಉತ್ತಮ...

ತಾಂತ್ರಿಕ ಸಹಾಯಕರ ಹುದ್ದೆ: ಅರ್ಜಿ ಅಹ್ವಾನ

ಉಡುಪಿ, ಜ.19: ಕೃಷಿ ಇಲಾಖೆಯ ವತಿಯಿಂದ ಅನುಷ್ಟಾನಗೊಳಿಸುತ್ತಿರುವ ಆಹಾರ ಮತ್ತು ಪೌಷ್ಟಿಕ...

ಜ. 19-21 ರವರೆಗೆ ನಾಟಕೋತ್ಸವ ಪ್ರದರ್ಶನ

ಉಡುಪಿ, ಜ.19: ಕಾರ್ಕಳ ಯಕ್ಷ ರಂಗಾಯಣ ಇವರ ವತಿಯಿಂದ ಜನವರಿ 19...

ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ಉಡುಪಿ, ಜ.19: ರಾಷ್ಟ್ರೀಯ ಹೆದ್ದಾರಿ 169 ಎ ರ ಉಡುಪಿ ನಗರ...
error: Content is protected !!