ಒಂದೇ ಸಮನೆ ಗುಡುಗಿನ ಆರ್ಭಟ, ಮಳೆ ಬಿರುಗಾಳಿಯಿಂದ ನರ್ತಿಸುತ್ತಿರುವ ಮರಗಳು, ಮಾವಿನ ಮರದಿಂದ ಬೀಳುವ ಮಾವಿನ ಕಾಯಿ…ಇದೆಲ್ಲವನ್ನು ನೋಡುತ್ತಾ ನಿಂತಿದ್ದೆ. ಚಳಿಯಿಂದ ನಡುಗುತ್ತಿದ್ದೆ. ಅಷ್ಟರಲ್ಲಿ ದೇವರ ಪೂಜೆ ಶುರುವಾಯಿತು. ದೇವರನ್ನು ಪ್ರಾರ್ಥಿಸುತ್ತಾ “ಹೇ, ದೇವರೇ ಏನು ಹೇಳಲಿ ನಿನ್ನ ಪ್ರೀತಿಯ ಬಗ್ಗೆ ಇಲ್ಲಿ ಬರುವ ಪ್ಲಾನ್ ಇರಲಿಲ್ಲ ಆದರೆ ನೀನು ಕರೆಸಿಕೊಂಡೆ” ಇದಕ್ಕೆ ಹೇಳುವುದು ದೇವರ ಮಹಿಮೆ ಅಪಾರವೆಂದು. ಈ ವೇಳೆಗೆ ನಾವು ಭುವನೇಶ್ವರಕ್ಕೆ ಹೋಗಬೇಕಿತ್ತು ಆದರೆ ನಾವು ಮಳೆಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಿದ್ದೆವು. ಅದನ್ನ ನೀನು ಮೊದಲೇ ಅರಿತು ನಮ್ಮನ್ನು ಇಲ್ಲಿಗೆ ಕರೆಸಿಕೊಂಡೆ ಇದಕ್ಕೆ ಹೇಳುವುದು ದೇವರು ಎಲ್ಲವನ್ನೂ ಬಲ್ಲವನು ಎಂದು. ಮಳೆ ನಿಲ್ಲುತ್ತಾನೆ ಇಲ್ಲ ನನ್ನ ಮನಸ್ಸಿನಲ್ಲಿ ಒಂದೇ ಆಲೋಚನೆ ತಿರುಗುತ್ತಾ ಇತ್ತು ನಾವು ಒಡಿಸ್ಸಾ ಟೂರ್ ಪ್ಲಾನ್ ಮಾಡುವಾಗ ಸಾಕ್ಷಿ ಗೋಪಾಲ್ ದೇವಸ್ಥಾನ ನೋಡಬೇಕೆಂದು ಇಚ್ಚಿಸಿದೆವು. ಆದರೆ ಪೂರಿಯಿಂದ ಭುವನೇಶ್ವರಕ್ಕೆ ವಾಪಸ್ ಹೋಗುವಾಗ ಸಮಯದ ಅಭಾವದಿಂದ ಅದನ್ನು ಕ್ಯಾನ್ಸಲ ಮಾಡಿದೆವು. ಆದರೆ ದೇವರ ಇಚ್ಛೆ ನಾವು ಅಲ್ಲಿ ಭೇಟಿ ನೀಡಲೇ ಬೇಕೆಂದಿತ್ತು.
ಆದದ್ದು ಏನೆಂದರೆ …ನಾವು ಪೂರಿಯಿಂದ ಭುವನೇಶ್ವರಕ್ಕೆ ಟ್ಯಾಕ್ಸಿಯಲ್ಲಿ ಹೋಗುತ್ತಿದ್ದೆವು. ಪೂರಿಯಿಂದ 20 ಕಿಲೋ ಮೀಟರ್ ದೂರ ಬಂದ ಮೇಲೆ, ಟ್ಯಾಕ್ಸಿ ಡ್ರೈವರ್ ನಮಗೆ ಇಲ್ಲಿ ಹತ್ತಿರದಲ್ಲಿ ಸಾಕ್ಷಿ ಗೋಪಾಲ ದೇವಸ್ಥಾನವಿದೆ ಹೋಗಬೇಕಾದರೆ ಇಲ್ಲಿ ಒಳಗೆ ತಿರುಗಬೇಕು ನಿಮಗೆ ನೋಡುವುದಿದ್ದರೆ ಅಲ್ಲಿ ಹೋಗಿ ಬರೋಣ ಎಂದು ಹೇಳಿದದಾಗ ನನಗೆ ಖುಷಿಯಾಗಿ ಆಯ್ತು ಹೋಗಿ ಬರೋಣ ಎಂದು ನಾನು ಹಾಗು ಇವರು ಒಪ್ಪಿಕೊಂಡೆವು. ಒಪ್ಪಿಕೊಂಡ ಐದೇ ನಿಮಿಷದಲ್ಲಿ ಒಮ್ಮೆಲೆ ಗಾಢ ಅಂದಕಾರವಾಗತೊಡಗಿತು. ನೋಡಲು ಭಯವಾಗುತ್ತಿತ್ತು ಕಪ್ಪು ಮೋಡಗಳು, 10 ನಿಮಿಷದಲ್ಲಿ ಜೋರು ಮಳೆ ಶುರುವಾಯಿತು. ದೇವಸ್ಥಾನ ಬಂದ ತಕ್ಷಣ ನಾವೆಲ್ಲ ದೇವಸ್ಥಾನಕ್ಕೆ ತೆರಳಿದೆವು. ನಂತರ ಅಲ್ಲಿ ಗುಡುಗು ಸಿಡಿಲು ಬಿರುಗಾಳಿ ಒಂದೇ ಸಮನೆ ಬರಲು ಆರಂಭವಾಯಿತು. ದೇವರೇ ನಮ್ಮನ್ನು ಇಲ್ಲಿ ಕರಿಸಿಕೊಂಡ ಎಂದೆನಿಸಿತು. ಇಲ್ಲದಿದ್ದರೆ ನಾವು ಕಾರಿನಲ್ಲಿ ಹೋಗಲು ಆಗದೆ ಮರದ ಕೆಳಗೆ ನಿಲ್ಲಲು ಆಗದೆ ಪರದಾಡಬೇಕಿತ್ತು.
ಎಷ್ಟು ಮರಗಳು ದಾರಿಯ ಮೇಲೆ ಬಿದ್ದಿತ್ತು ನಾವು ವಾಪಸ್ ಹೋಗುವಾಗ ಕಂಡೆವು. ನಾವು ಇಲ್ಲಿ ಸಿಲುಕದೆ ಇದ್ದದ್ದಕ್ಕೆ ದೇವರಿಗೆ ಧನ್ಯವಾದ ಹೇಳಿದೆ. 45 ನಿಮಿಷಗಳ ಕಾಲ ಹೀಗೆ ನಡೆಯಿತು. ಜಪ ಮಾಡುತ್ತಿದ್ದೆ. ಮಳೆ ನಿಂತ ಮೇಲೆ ವಾಪಸ್ ಹೋಗುವಾಗ ಅಲ್ಲೆಲ್ಲಾ ಕಡೆ ಮರ ಬಿದ್ದಿತ್ತು. ಆದರೆ ಅಲ್ಲಿ ಎಷ್ಟು ಬೇಗ ರೊಡ ಕ್ಲಿಯರ್ ಮಾಡಿತ್ತು ಎಂದು ಹೇಳಿದರೆ 15 ನಿಮಿಷದಲ್ಲಿ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಟೀಮ್ ನವರು ರೋಡಿನ ಮೇಲೆ ಬಿದ್ದ ಮರವನ್ನು ಸೈಡಿಗೆ ಹಾಕಿ ಆಗಿತ್ತು. ಆಗ ನಮ್ಮ ಕಾರಿನ ಡ್ರೈವರ್ ಹೇಳಿದರು “ಓಡಿಸಾದ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಟೀಮ್ ಬೇಗ ಕೆಲಸ ಮಾಡತ್ತದೆಯೆಂದು ಅವಾರ್ಡ್ ಸಿಕ್ಕಿದೆ” ಎಂದು ತಿಳಿಸಿದರು.. ನನಗೆ ಕೇಳಿ ತುಂಬಾ ಖುಷಿಯಾಯಿತು. ಎಷ್ಟು ಬೇಗ ರೋಡ್ ಕ್ಲಿಯರ್ ಮಾಡಿದರು. ಇದು ನಮ್ಮ ಹೆಮ್ಮೆಯ ಭಾರತ ಎನಿಸಿತು.
ಹಳದಿ ಬಣ್ಣದ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಟೀಮ್ ಎನ್ನುವ ಲೋಗೋ ಇದ್ದ ಜಾಕೆಟ್ ಹಾಕಿರುವ ಮಂದಿಯನ್ನು ನೋಡಿದೆವು. ನಾನು ವಿಡಿಯೋ ಕೂಡ ಮಾಡಿದ್ದೇನೆ. ಸಾಕ್ಷಿ ಗೋಪಾಲ್ ಹೆಸರು ತಿಳಿಸುವಂತೆ ಗೋಪಾಲಕೃಷ್ಣನ ದೇವಸ್ಥಾನವಿದು. ಈ ದೇವಸ್ಥಾನದ ರೋಚಕ ಕಥೆ ಹೀಗಿದೆ. ಒಬ್ಬ ಬಡ ಹುಡುಗ ಒಬ್ಬ ಶ್ರೀಮಂತ ಹುಡುಗಿಯನ್ನು ಪ್ರೀತಿಸುತ್ತಿದ್ದ ಆದರೆ ಆ ಹುಡುಗಿಯ ತಂದೆ ಆ ಹುಡುಗ ಬಡವನಾದ್ದರಿಂದ ಒಪ್ಪಲಿಲ್ಲ. ಒಂದು ದಿನ ಹಳ್ಳಿಯ ಜನರು ಈ ಶ್ರೀಮಂತ ಸೇರಿ ಬೃಂದಾವನ ಯಾತ್ರೆಗೆ ತೆರಳುತ್ತಾರೆ. ಆದರೆ ಮಾರ್ಗದ ಮಧ್ಯದಲ್ಲಿ ಶ್ರೀಮಂತನಿಗೆ ಆರೋಗ್ಯ ಕೆಡುತ್ತದೆ. ಆಗ ಈ ಹುಡುಗ ಆರೈಕೆ ಮಾಡುತ್ತಾನೆ. ಬೇರೆ ಎಲ್ಲಾ ಹಳ್ಳಿಗಳರು ಆ ಶ್ರೀಮಂತನನ್ನು ಬಿಟ್ಟು ಹೋಗುತ್ತಾರೆ. ಈ ಹುಡುಗನ ಆರೈಕೆಯಿಂದ ಶ್ರೀಮಂತ ಆರೋಗ್ಯವಂತನಾಗುತ್ತಾನೆ. ಆಗ ಅವನು ನನ್ನ ಮಗಳಿಗೆ ಕೊಟ್ಟು ಮದುವೆ ಮಾಡಿಸುತ್ತೇನೆಎಂದು ವಚನ ನೀಡುತ್ತಾನೆ. ಆದರೆ ತಮ್ಮ ಹಳ್ಳಿಗೆ ವಾಪಸ್ಸು ಬಂದ ಮೇಲೆ ನಾನು ಯಾವುದೇ ಪ್ರಾಮಿಸ್ ಮಾಡಲಿಲ್ಲ ಎಂದು ಹೇಳುತ್ತಾನೆ. ನಾನು ಹಾಗೆ ಹೇಳಿದ್ದೇನೆಂದು ಯಾವುದಾದರೂ ಸಾಕ್ಷಿ ತರಬೇಕೆಂದು ಹೇಳುತ್ತಾನೆ. ಹುಡುಗ ಕೃಷ್ಣನ ಭಕ್ತನಾಗಿದ್ದರಿಂದ ಕೃಷ್ಣನನ್ನು ಸಾಕ್ಷಿಯಾಗಿ ಬರಲು ವಿನಂತಿಸಿಕೊಳ್ಳುತ್ತಾನೆ. ಈ ಹುಡುಗನ ಭಕ್ತಿಯನ್ನು ಮೆಚ್ಚಿ ಕೃಷ್ಣದೇವರು ಒಪ್ಪಿಕೊಳ್ಳುತ್ತಾರೆ. ಆದರೆ ಒಂದು ಶರತ್ತು ಹಾಕುತ್ತಾರೆ ಅದೇನೆಂದರೆ ನಿನ್ನ ಹಿಂದೆ ಬರುವಾಗ ನನ್ನನ್ನು ಹಿಂದೆ ತಿರುಗಿ ನೋಡಬಾರದೆಂದು. ಹೀಗೆ ಇಬ್ಬರು ಹೋಗುವಾಗ ಸ್ವಲ್ಪ ದೂರ ಹೋದ ಮೇಲೆ ದೇವರು ನಡೆಯುವುದು ಕೇಳಿಸಲಿಲ್ಲವೆಂದು ಆ ಹುಡುಗ ಹಿಂತಿರುಗಿ ನೋಡುತ್ತಾನೆ ಆಗ ದೇವರು ಅಲ್ಲೇ ಮೂರ್ತಿ ರೂಪದಲ್ಲಿ ಸ್ಥಾಪಿತನಾಗುತ್ತಾನೆ.
ಮುಂದೆ ಹಳ್ಳಿಗರಿಗೆ ಹಾಗು ಶ್ರೀಮಂತನಿಗೆ ವಿಷಯ ತಿಳಿದು ಇಬ್ಬರ ಮದುವೆ ಮಾಡಿಸುತ್ತಾರೆ. ಅಲ್ಲಿ ದೇವಸ್ಥಾನವನ್ನು ಕಟ್ಟಲಾಗುತ್ತದೆ. 11ನೇಯ ಶತಮಾನದ ಕಥೆ ಇದು. ಹೀಗೆ ಸಾಕ್ಷಿ ಹೇಳಲಿಕ್ಕೆ ಬಂದ ಗೋಪಾಲ ಕೃಷ್ಣ ಸಾಕ್ಷಿ ಗೋಪಾಲನೆಂದು ಹೆಸರು ಬಂತು. ಭಕ್ತನ ಸಹಾಯ ಮಾಡಲು ದೇವರು ಸದಾ ಸಿದ್ದವೆಂದು ದೇವರು ಇಲ್ಲಿ ತೋರಿಸಿ ಕೊಡುತ್ತಾನೆ. ಹೀಗೆ ಬೇರೆ ಕಡೆ ಹೋಗಬೇಕೆಂದು ಪ್ಲಾನ್ ಮಾಡಿದ ನಮಗೆ ಅಲ್ಲಿ ಡ್ರೈವರ್ ಮುಖೇನ ಕರೆಸಿ ನಮಗೆ ಆಶ್ರಯ ನೀಡಿದ್ದಕ್ಕೆ ಅನಂತ ಅನಂತ ಧನ್ಯವಾದಗಳು ಎಂದು ಮನಸ್ಸಿನಲ್ಲಿ ಹೇಳಿಕೊಂಡೆ.
-ಡಾ.ಹರ್ಷಾ ಕಾಮತ್