ಆಮೆ ಎಷ್ಟು ಮೆಲ್ಲನೆ ನಡೆಯುತ್ತದೆ. ಅಯ್ಯೋ, ಅದರ ಜೀವನ ಎಷ್ಟು ಬೋರ್ ಅನಿಸುತ್ತಿದೆಯೇ? ಈ ಧಾವಂತದ ಬದುಕಿನಲ್ಲಿ ಮನಸ್ಸಿನ ಶಾಂತತೆ ದೂರವಾಗಿದೆ. ಎಲ್ಲವನ್ನು ತಿಳಿಯುವ ಎಲ್ಲರನ್ನೂ ಹಿಂದೆ ಹಾಕಿ ಮುಂದೆ ಹೋಗುವ ಅವಸರ ನಮಗೆ. ಈ ಅವಸರವೇ ನಮ್ಮ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ಯೋಚಿಸಿ ನೋಡಿ. ಯಾಕೆ ಅವಸರ ನಮಗೆ ಗೊತ್ತಿಲ್ಲ ನಮಗೆ ಏನು ಬೇಕು ಎಷ್ಟು ಬೇಕು ಅದಕ್ಕಿಂತ ಮುಂಚೆ ಗೊತ್ತಿಲ್ಲ.
ಬದುಕೆಂಬುದು ಒಂದು ರನ್ನಿಂಗ್ ರೇಸ್ ಆಗಿಬಿಟ್ಟಿದೆ. ಈ ರನ್ನಿಂಗ್ ರೇಸನ್ನು ಬಿಟ್ಟು ಆಮೆಯ ಹಾಗೆ ಮುಂದೆ ಸಾಗಿದರೆ ಮಾತ್ರ ಜೀವನದ ಮಧುರ ಕ್ಷಣವನ್ನು ಸವಿಯಲು ಆಗುತ್ತದೆ. ಇದೇ ನಮ್ಮಲ್ಲಿ ಕ್ಷೀಣವಾಗುತ್ತಿದೆ. ನಾ ಮುಂದು ತಾ ಮುಂದು ಎಂದು ಬಿಜಿ ಜೀವನ ಒಳ್ಳೆಯದು ಎಂದು ಅಂದುಕೊಂಡಿದ್ದೇವೆ. ಬಿಜಿ ಇರುವುದು ಒಳ್ಳೆಯದು, ಆದರೆ ಎಲ್ಲವನ್ನು ಅವಸರ ಮಾಡದೆ ನಿಧಾನವಾಗಿ ಎಲ್ಲಾ ಕೆಲಸವನ್ನು ಮಾಡುವುದನ್ನು ಕಲಿಯಬೇಕು. ಆಗ ಪ್ರತಿ ಕೆಲಸವನ್ನು ಮಾಡಿದ ಅನುಭವ ಮನಸ್ಸಿನಲ್ಲಿ ಉಳಿಯುತ್ತದೆ. ಜೀವನದ ರುಚಿಯನ್ನು ಆಸ್ವಾದಿಸಲು ಆಗುತ್ತದೆ. ಇದು ಹೇಗೆ ಎಂಬುದು ಅರ್ಥವಾಗಲಿಲ್ಲವೇ? ಉದಾಹರಣೆಗೆ ದೇವರಿಗೆ ಹೂವನ್ನು ತರುವಾಗ ಗಡಿಬಿಡಿ ಮಾಡದೆ ಆ ಹೂವನ್ನು ತಾನು ದೇವರಿಗೆ ಅರ್ಪಿಸುತ್ತೇನೆ ಎಂದು ಅಥವಾ ಹೂ ಎಷ್ಟು ಚಂದವೆಂದು ಅಥವಾ ಹೂವಿನ ಆಕಾರ, ಬಣ್ಣ ನೋಡುವುದನ್ನು ಕಲಿತರೆ, ಆ ಕೆಲಸಕ್ಕೆ ಅಂದರೆ ದೇವರಿಗೆ ಹೂವು ಇಡುವ ಕೆಲಸ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ದೇವರಿಗೆ ಹೂವಿಡಬೇಕು ಎಂದು ಮನಸ್ಸಿನಲ್ಲಿ ಏನೇನೋ ಆಲೋಚನೆ ಮಾಡಿ ಗಡಿಬಿಡಿಯಲ್ಲಿ ಗಿಡಗಳಿಂದ ಹೂ ಕಿತ್ತು ದೇವರಿಗೆ ಅರ್ಪಿಸಿದರೆ ಏನು ಪ್ರಯೋಜನ? ಅದು ಕಾಟಾಚಾರದ ಕೆಲಸವಾಗಿ ಬಿಡುತ್ತದೆ. ಯೋಚಿಸಿ ನೋಡಿ. ಇದು ಒಂದು ಉದಾಹರಣೆ ಮಾತ್ರ.
ಆಮೆಯಂತಹ ಜೀವನ ನಡೆಸಲು ನಾವು ಮಾಡುವ ಎಲ್ಲಾ ಕೆಲಸವನ್ನು ಮನಸ್ಸಿಟ್ಟು ಪ್ರೀತಿಯಿಂದ ಕಾರ್ಯದಲ್ಲಿ ಮಗ್ನವಾಗಿ ಅದನ್ನು ಅನುಭವಿಸಿ ಸಾವಧಾನವಾಗಿ ಮಾಡಿದಾಗ ನಮ್ಮ ಜೀವನಕ್ಕೊಂದು ಅರ್ಥವಿರುತ್ತದೆ. ಹೌದಲ್ಲವೇ?
ಡಾ. ಹರ್ಷಾ ಕಾಮತ್