ಅವರನ್ನು ಕಂಡರೆ ಏನೋ ಒಂಥರಾ ಆಗುತ್ತೆ, ಅವರ ಗುಣಗಳು ನನಗೆ ಹಿಡಿಸುವುದಿಲ್ಲ, ಅವರು ಏನೋ ಅಂದರು ಅಂತ ನಮಗೆ ಆ ವ್ಯಕ್ತಿಯ ಮೇಲೆ ಏನೋ ಅಸಹನೆ, ಕೆಲವೊಮ್ಮೆ ಅದು ಯಾವ ಭಾವನೆ ಎಂದು ತಿಳಿಯಲು ಕೂಡ ಕಷ್ಟ. ಅದು ಸಹನೆಯೋ, ಕೋಪವೋ, ಅಸೂಯೆಯೋ ಅಥವಾ ಏನೂ ಕಾರಣವಿಲ್ಲದೆ ಬರೀ ಇಷ್ಟವಿಲ್ಲದ ವ್ಯಕ್ತಿಯೋ ಗೊತ್ತಿಲ್ಲ. ಹೀಗೆ ಮುಂದುವರಿಯುತ್ತಾ ಹೋಗಿ ಒಂದು ದಿನ ನಾವು ಆ ವ್ಯಕ್ತಿಯನ್ನು ದ್ವೇಷಿಸಲು ಪ್ರಾರಂಭ ಮಾಡಲು ಸಾಕು. ಕಾರಣವನ್ನು ಅರಿಯದೆ ಸುಮ್ಮನೆ ದ್ವೇಷಿಸುವುದು ಸಮಂಜಸವೇ ಹೇಳಿ. ಈಗ ಕಾರಣಗಳನ್ನು ಹುಡುಕುತ್ತಾ ಹೋದಾಗ ಕಾರಣಗಳ ಪಟ್ಟಿಯೇ ನಮ್ಮಲ್ಲಿ ಇರಬಹುದು. ಆ ವ್ಯಕ್ತಿ ನಮಗೆ ಹೀಗೆ ಮಾಡಿದ್ದ ಆದ್ದರಿಂದ ನನಗೆ ಅವನನ್ನು ಕಂಡರೆ ಆಗುವುದಿಲ್ಲ ಅಥವಾ ಆ ವ್ಯಕ್ತಿಯು ನಮಗಿಂತ ಪ್ರತಿಭೆಯಲ್ಲಿ ಅಥವಾ ಅಂತಸ್ತಿನಲ್ಲಿ ಅಥವಾ ಯಾವುದೇ ವಿಷಯದಲ್ಲಿ ನಮಗಿಂತ ಮುಂದೆ ಇದ್ದರೂ ಆ ವ್ಯಕ್ತಿಯ ಮೇಲೆ ಅಸೂಯೆ ಪಟ್ಟು ಆ ವ್ಯಕ್ತಿಯಿಂದ ದೂರ ಸರಿಯುತ್ತೇವೆ.
ಕಾರಣ ಏನೇ ಇರಲಿ ಆ ವ್ಯಕ್ತಿಯನ್ನು ದ್ವೇಷಿಸುವುದರಿಂದ ನಮ್ಮಲ್ಲಿ ಮಾನಸಿಕವಾಗಿ ಬದಲಾಯಿಸಲಾಗದ ಹಾನಿಯುಂಟು ಮಾಡುತ್ತವೆ. ಅದು ನಮಗಷ್ಟೇ ಅಲ್ಲ ನಮ್ಮ ಸುತ್ತಲಿನ ಮಂದಿಗೂ ಅವರ ಮೇಲೆ ದ್ವೇಷಿಸುವಂತೆ ಪ್ರೇರೇಪಿಸುತ್ತದೆ. ನಾವು ಬೇರೆಯವರನ್ನು ಕೂಡ ಹಾಳು ಮಾಡುತ್ತಿರುತ್ತೇವೆ. ನಾವು ಅವರನ್ನು ದ್ವೇಷಿಸುವುದು ಸರಿ ಎಂದು ನಮಗೆ ಅನಿಸುತ್ತದೆ. ಆದರೆ ನೆನಪಿನಲ್ಲಿ ಇಟ್ಟುಕೊಳ್ಳಿ ಇದರಿಂದ ನಮಗೆ ಹಾನಿಯೇ ವಿನಾ ಇತರರಿಗಲ್ಲ. ನಮಗೆ ಅವರು ಇಷ್ಟವಾಗದೇ ಇರಲು ಕಾರಣಗಳು ಇವೆ ಎಂದು ನೀವು ಹೇಳಬಹುದು. ಹಾಗಾದರೆ ನಾವು ಜೀವನದಲ್ಲಿ ಯಾವುದೇ ತಪ್ಪು ಮಾಡಿಯೇ ಇಲ್ಲವೇ? ನಾವು ಮನುಷ್ಯರು ತಾನೆ? ತಪ್ಪು ಮಾಡುವುದು ಸಹಜ. ನಮ್ಮ ತಪ್ಪಿಗೆ ನಮ್ಮ ನಡವಳಿಕೆ ಬೇರೆಯವರಿಗೆ ಸರಿ ಅನಿಸದೆ ಇರಬಹುದು ಅಲ್ಲವೇ? ಇದು ಯೋಚಿಸಬೇಕಾದ ಅಂಶ. ನಮ್ಮನ್ನು ಕೂಡ ಕಾರಣವಿಲ್ಲದೇ ಅಥವಾ ಕಾರಣವಿದ್ದು ಬೇರೆಯವರು ನಮಗೆ ದ್ವೇಷಿಸಬಹುದು ಅಲ್ಲವೇ? ಆಗ ನಮಗೆ ಹೇಗೆ ಅನಿಸುವುದು ಹೇಳಿ? ಇದರ ಬಗ್ಗೆ ವಿಚಾರ ಮಾಡಿ ನೋಡಿ .ಅದೇ ರೀತಿ ನಾವು ಇಷ್ಟಪಡದ ವ್ಯಕ್ತಿಯ ಬಗ್ಗೆ ಇರುವ ಯಾವುದೇ ಭಾವನೆ ಇರಲಿ ಅದನ್ನು ದೂರವಿರಿಸಿದರೆ ನಮಗೆ ಕೂಡ ಒಳ್ಳೆಯದು ಇತರರಿಗೂ ಒಳ್ಳೆಯದು. ನಾವು ಒಬ್ಬ ವ್ಯಕ್ತಿಯ ಗುಣಗಳನ್ನು ಇಷ್ಟಪಡದೇ ಇರಬಹುದು ಅದು ಅವರ ವೈಯಕ್ತಿಕ ಗುಣಗಳು. ಎಲ್ಲರೂ ನಮ್ಮ ಹಾಗೆ ಇರಬೇಕು ಎಂದೇನೂ ಇಲ್ಲವಲ್ಲ. ಇಲ್ಲಿ ನಾವು ಹೇಳಬಹುದು ಅವರ ಗುಣ ಕೆಟ್ಟದ್ದು ಎಂದು. ಅದು ನಿಮಗೆ ಕೆಟ್ಟದ್ದೂ ಇರಬಹುದು ಆದರೆ ಬೇರೆಯವರಿಗೆ ಸರಿ ಇರಬಹುದು ಅಲ್ಲವೇ? ಅದು ಬೇರೆಯವರಿಗೆ ಸಹಾಯವಾಗುತ್ತಿರಬಹುದು ಅಲ್ಲವೇ? ಒಬ್ಬ ವ್ಯಕ್ತಿಯಿಂದ ಸಮಾಜಕ್ಕೆ ಪರಿಸರಕ್ಕೆ ಕುಟುಂಬಕ್ಕೆ ಹಾನಿ ತರುವಂತಹ ಗುಣಗಳು ಇದ್ದರೆ ಮಾತ್ರ ಅದನ್ನು ಕೆಟ್ಟದ್ದು ಎಂದು ಹೇಳಬಹುದು. ಬೇರೆಯವರಿಗೆ ಕೆಟ್ಟದ್ದನ್ನು ಬಯಸಿ ಕೇಡು ಮಾಡಿದರೆ ಮಾತ್ರ ಅದು ಕೆಟ್ಟದ್ದು ಎಂದು ಪರಿಗಣಿಸಬಹುದು.
ಆದರೆ ಇಲ್ಲಿ ವಿಷಯ ನಾವು ಯಾವುದೇ ವ್ಯಕ್ತಿ ಇರಲಿ ಅವರ ಕೆಟ್ಟ ಗುಣಗಳನ್ನು ಮಾತ್ರ ದ್ವೇಷಿಸಬೇಕು ಆ ವ್ಯಕ್ತಿಯನ್ನು ಅಲ್ಲ. ಏಕೆಂದರೆ ನಾವು ಅವರ ಕೆಟ್ಟ ಗುಣಗಳನ್ನು ದ್ವೇಷಿಸಿದಾಗ ನಮ್ಮ ಮನಸ್ಸಿನಲ್ಲಿ ಆ ಗುಣಗಳನ್ನು ದ್ವೇಷಿಸುತ್ತೇವೆ ಆಗ ನಮ್ಮ ಮನದಲ್ಲಿ ಕೆಟ್ಟ ಪರಿಣಾಮ ಬೀರುವುದಿಲ್ಲ. ಅದೇ ಆ ಕೆಟ್ಟ ಗುಣವಿರುವ ವ್ಯಕ್ತಿಯನ್ನು ದ್ವೇಷಿಸಿದರೆ ಎಲ್ಲಿಲ್ಲದ ಕೋಪ ಬರುವುದು. ದೇಹಕ್ಕೆ ಹಾಗೂ ಮನಸ್ಸಿಗೆ ಅದು ಅಘಾದ ಪರಿಣಾಮ ಬೀರುವುದು. ಮುಂದೆ ಅವರೇನೇ ಮಾಡಿದರೂ ನಮಗೆ ಅವರ ಮೇಲೆ ಕೋಪ, ದ್ವೇಷ ಕಡಿಮೆಯಾಗದು. ಆದ್ದರಿಂದ ಯಾವುದೇ ವ್ಯಕ್ತಿ ಇರಲಿ ಅವರ ಕೆಟ್ಟ ಗುಣಗಳನ್ನು ದ್ವೇಷಿಸಿ ಆ ವ್ಯಕ್ತಿಯನ್ನಲ್ಲ.
ಈ ಲೇಖನದ ತಾತ್ಪರ್ಯ ಏನೆಂದರೆ ನಾವು ಸಮಾಜದಲ್ಲಿ ಅನೇಕ ವ್ಯಕ್ತಿಗಳನ್ನು, ದೇಶದ್ರೋಹಿ ಇರಬಹುದು, ಟೆರರಿಸ್ಟ್ ಇರಬಹುದು ಅಥವಾ ಬೇರೆ ಯಾರೇ ಕೇಡು ಮಾಡುವವರನ್ನು ಅಥವಾ ಬೇರೆಯವರಿಗೆ ಕೇಡು ಮಾಡುವ ವ್ಯಕ್ತಿಗಳನ್ನು ನಾವು ದ್ವೇಷಿಸಬಾರದು ಎಂದು. ಅವರ ಕೆಟ್ಟ ಗುಣಗಳನ್ನು ಮಾತ್ರ ದ್ವೇಷಿಸಬೇಕು. ಆ ವ್ಯಕ್ತಿಯನ್ನೇ ದ್ವೇಷಿಸಿದಾಗ ನಮ್ಮಲ್ಲಿ ರೋಷ ಬೆಳೆಯುತ್ತದೆ, ನಮಗೆ ಹಾನಿಯುಂಟಾಗುತ್ತದೆ. ಆದರೆ ಆ ವ್ಯಕ್ತಿಯನ್ನು ಬದಿಗಿಟ್ಟು ಅವರ ಕೆಟ್ಟ ಗುಣಗಳನ್ನು ಮಾತ್ರ ದ್ವೇಷಿಸಿದರೆ ಆಗ ನಮಗೆ ಹಾನಿಯಾಗುವುದಿಲ್ಲ.Think about it.
-ಡಾ. ಹರ್ಷಾ ಕಾಮತ್