ಜೂನ್ 14 ಜ್ಯೇಷ್ಠ ಮಾಸದ ಹುಣ್ಣಿಮೆ ಸೂಪರ್ ಮೂನ್. ಚಂದ್ರ ಭೂಮಿಯ ಸುತ್ತ 28 ದಿನಗಳಿಗೊಮ್ಮೆ ಸುತ್ತುವ ತಿರುಗಾಟದಲ್ಲಿ ಅಂದು ಪೆರಿಜಿಯಲ್ಲಿ, ಅಂದರೆ ಭೂಮಿಗೆ ಸಮೀಪ. ಸರಾಸರಿ ದೂರಕ್ಕಿಂತ ಸುಮಾರು 30 ಸಾವಿರ ಕಿ ಮೀ ಹತ್ತಿರ. ಚಂದ್ರ ತನ್ನ ದೀರ್ಘ ವೃತ್ತಾಕಾರದ ಪಥದಲ್ಲಿ 28 ದಿನಗಳಿಗೊಮ್ಮೆ ಭೂಮಿಗೆ ಸಮೀಪ, ಪೆರಿಜಿಯಲ್ಲಿ ಹಾಗೂ ದೂರದ ಅಪೊಜಿಯಲ್ಲಿ ಬರುವುದು ವಾಡಿಕೆ.
ಈ ಪೆರಿಜಿಗೆ ಬಂದಾಗ ಹುಣ್ಣುಮೆ ಯಾದರೆ ಸೂಪರ್ ಚಂದ್ರ. ಹತ್ತಿರ ಬರುವುದರಿಂದ ಈ ದಿನ ಚಂದ್ರ ನಮಗೆ ಸುಮಾರು 15 ಅಂಶ ಗಾತ್ರದಲ್ಲಿ ದೊಡ್ಡದಾಗಿ 25 ಅಂಶ ಹೆಚ್ಚಿನ ಬೆಳಕಿಂದ ಖುಷಿ ಕೊಡುತ್ತದೆ.
ಚಂದ್ರ ಭೂಮಿಗಳ ಸರಾಸರಿ ದೂರ 3 ಲಕ್ಷ ದ 84 ಸಾವಿರ ಕಿಮೀ ಆದರೆ ಇಂದು, 3 ಲಕ್ಷದ 57 ಸಾವಿರ.
ಈಗ ಜ್ಯೇಷ್ಠ ಮಾಸ. ಭಾರತೀಯರ ಮಾಸಗಳ ಕಲ್ಪನೆ ಬಲು ಚಂದ. ಹುಣ್ಣಿಮೆಯ ಚಂದ್ರ ಆ ದಿನ ಯಾವ ನಕ್ಷತ್ರದ ಜೊತೆಗಿರುವನೋ ಆ ನಕ್ಷತ್ರದ ಹೆಸರನ್ನು ಆ ತಿಂಗಳಿಗೆ ನಮ್ಮ ಹಿರಿಯರು ಇಟ್ಟಿರುವುದು ಅವರ ಆಕಾಶ ವೀಕ್ಷಣಾ ಪ್ರೌಢ ಜ್ನಾನವನ್ನು ತಿಳಿಸುತ್ತದೆ.
ಇಂದು ವೃಶ್ಚಿಕ ರಾಶಿಯ ಸುಂದರ ನಕ್ಷತ್ರ ಜ್ಯೇಷ್ಠ, ಅಂಟಾರಸ್ ನ ಪಕ್ಕದಲ್ಲಿ ಚಂದ್ರ ಉದಯಿಸುತ್ತದೆ. ಹಾಗಾಗಿ ಈ ತಿಂಗಳಿನ ಹೆಸರು ಜ್ಯೇಷ್ಠ ಮಾಸ.
ಅದೇನು ಕಾಕತಾಳೀಯವೋ, ಸತ್ಯ ದರ್ಶನವೋ ತಿಳಿಯದು. ನಮ್ಮ ಭಾರತೀಯ ಪೂರ್ವಿಕರು 27 ನಕ್ಷತ್ರಗಳಲ್ಲಿ ಈ ಅಂಟಾರಸ್ ನ್ನು ಜ್ಯೇಷ್ಠ ಎಂದು ನಾಮಕರಣ ಅದ್ಹೇಗೆ ಮಾಡಿದರೋ ತಿಳಿಯದು. ಜ್ಯೇಷ್ಠ ಅಂದರೆ ಹಿರಿದು, ದೊಡ್ಡದು ಎಂದರ್ಥ.
ಇಂದಿನ ಖಗೋಳ ವಿಜ್ಞಾನವೂ ಈಗ ಬರಿಗಣ್ಣಿಗೆ ಕಾಣುವ ನಕ್ಷತ್ರಗಳಲ್ಲಿ ಈ ಅಂಟಾರಸ್ ತುಂಬಾ ದೊಡ್ಡದೆಂದು ಸಾರಿದ್ದಾರೆ. ಈ ನಕ್ಷತ್ರ ನಮ್ಮ ಸೂರ್ಯನ ವ್ಯಾಸಕ್ಕಿಂತ ಸುಮಾರು 700 ಪಟ್ಟು ದೊಡ್ಡದು. ಹಾಗಾಗಿ ಸೂರ್ಯನಿಗಿಂತ ಕೋಟಿ ಕೋಟಿ ಪಟ್ಟು ದೊಡ್ಡದು.
ಭೂಮಿಗೆ ಚಂದ್ರ ಹತ್ತಿರ ಬಂದಾಗಲೆಲ್ಲಾ ಸಮುದ್ರದ ಭರತ ಇಳಿತ ಗಳ ಅಬ್ಬರ ಜೋರು. ಇದೀಗ ಮುಂಗಾರೂ ಅಬ್ಬರಿಸುವ ಸೂಚನೆ. ಇದರೊಂದಿಗೆ ಹುಣ್ಣಿಮೆ ಹಾಗೂ ಸೂಪರ್ ಮೂನ್ ಗಳಿಂದ ಸಮುದ್ರದ ತೆರೆಗಳ ನರ್ತನ ಈ ದಿನ ಜೋರಿರಬಹುದು. ಎಲ್ಲೆಲ್ಲೂ ಪ್ರಕೃತಿಯ ನರ್ತನವೇ. ನಾವು ಪ್ರೇಕ್ಷಕರು ಮಾತ್ರ.
ಡಾ. ಎ. ಪಿ. ಭಟ್ ಉಡುಪಿ (ಖಗೋಳಶಾಸ್ತ್ರಜ್ಞರು)