ವಸಂತ ಋತು ಚೈತ್ರ ಮಾಸದ ಮೊದಲನೆಯ ದಿನವನ್ನು ಪ್ರಕೃತಿಯೇ ಸರ್ವಾಲಂಕಾರದೊಂದಿಗೆ ವಿಶೇಷವಾಗಿ ಸ್ವಾಗತಿಸುವುದನ್ನು ಅನೇಕ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಜನರು ತಮ್ಮ ಮನೆಯ ಪ್ರವೇಶ ದ್ವಾರದ ಬಳಿ ವರ್ಣಮಯ ಆಧ್ಯಾತ್ಮಿಕ ಶೈಲಿಯ ರಂಗೋಲಿಯೊಂದಿಗೆ, ಮಾವಿನ ತೋರಣಗಳ ಜೊತೆಗೆ ಇನ್ನಿತರ ವಸ್ತುಗಳನ್ನು ಬಳಸಿ ತಮ್ಮ ನಿವಾಸಕ್ಕೆ ನೈಸರ್ಗಿಕ ಅಲಂಕಾರ ಮಾಡಿ, ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ಹೊಸ ಉಡುಪುಗಳನ್ನು ಧರಿಸಿ ಹೊಸ ವರ್ಷವನ್ನು ಆಚರಿಸುವ ರೀತಿಯಲ್ಲಿಯೇ ಪ್ರಕೃತಿಯು ಹೊಸ ಚಿಗುರಿನೊಂದಿಗೆ, ಹಚ್ಚ ಹಸುರಿನ ಧಿರಿಸನ್ನು ಧರಿಸಿಕೊಂಡು ಸುಗಂಧಮಯ ಪರಿಮಳವನ್ನು ಸುತ್ತಲೂ ಪಸರಿಸಿ, ಕೋಗಿಲೆಯ ಇಂಪಾದ ದನಿಯ ಹಿನ್ನಲೆಯಲ್ಲಿ ಚಾಂದ್ರಮಾನ ಯುಗಾದಿ ಆಚರಣೆಗೆ ಮುನ್ನುಡಿ ಬರೆಯುತ್ತಾಳೆ. ಯುಗ ಮತ್ತು ಆದಿ ಎಂಬ ಸಂಸ್ಕತ ಶಬ್ದಗಳ ಅರ್ಥ ‘ಯುಗದ ಆದಿ’. ಯುಗಾದಿಯು ಹಿಂದೂಗಳಿಗೆ ಅತ್ಯಂತ ಪ್ರಮುಖವಾದ ಹಬ್ಬ, ಐತಿಹಾಸಿಕ ಹಬ್ಬವೂ ಹೌದು. ಈ ದಿನ ಮನೆಯ ಹೊರಗಡೆ ಇರುವ ವಿವಿಧ ಗಿಡಮರಗಳು ಕೂಡ ಹೊಸ ಚಿಗುರು, ಹಚ್ಚಹಸಿರು ಎಲೆಗಳೊಂದಿಗೆ ಯುಗಾದಿ ಆಚರಣೆಗೆ ಸಾಥ್ ನೀಡುವುದನ್ನು ಗಮನಿಸಿದರೆ ನಮ್ಮ ಪೂರ್ವಜರು ನೈಸರ್ಗಿಕ ಚೌಕಟ್ಟಿನ ಅಡಿಯಲ್ಲಿಯೇ ಹಬ್ಬಗಳ ಶಾಸ್ತ್ರೋಕ್ತ ಆಚರಣೆ ಮತ್ತು ಅವುಗಳಿಗೆ ಸಾತ್ವಿಕ ಸ್ಪರ್ಶವನ್ನು ನೀಡುವ ಪರಿಕಲ್ಪನೆಯನ್ನು ಜಾಗೃತಗೊಳಿಸಿದರು.
ಸ್ವಚ್ಛತೆಯ ಕಾಳಜಿ: ಯುಗಾದಿಯ ಆಗಮನದ ಎರಡು ಮೂರು ವಾರಗಳ ಮುಂಚಿತವಾಗಿಯೇ ಬಹುತೇಕ ಮಂದಿ ತಮ್ಮ ಮನೆಯ ಒಳಗೆ ಮತ್ತು ಹೊರಗೆ ವಿಶೇಷ ರೀತಿಯಲ್ಲಿ ಸ್ವಚ್ಛಗೊಳಿಸುವುದನ್ನು ಗಮನಿಸಿದರೆ ಸ್ವಚ್ಛ ಭಾರತ ಅಭಿಯಾನ ಯಾವ ರೀತಿ ಅಂದಿನಿಂದಲೇ ಯುಗಾದಿ ಆಚರಣೆಯ ಒಂದು ಅವಿಭಾಜ್ಯ ಅಂಗವಾಗಿತ್ತು. ಯುಗಾದಿಯ ಈ ಶುಭ ಸಂದರ್ಭದಲ್ಲಿ ಪ್ರತಿಯೊಂದು ಮನೆಯು ಶುಚಿತ್ವದಿಂದ ಕೊಂಗೊಳಿಸುತ್ತದೆ. ಸ್ವಚ್ಛತೆಗೆ ಆದ್ಯತೆ ನೀಡುವವರಿಗೆ ಯಾವುದೇ ರೋಗದ ಭಯವಿಲ್ಲ. ಅಂದು ಪೂರ್ವಜರು ಬಿತ್ತಿದ ಸ್ವಚ್ಛತೆಯ ಬೀಜವು ಇಂದು ಹೆಮ್ಮರವಾಗಿದೆ. ಇದರಿಂದ ವಯಕ್ತಿಕ ಸ್ವಾಸ್ತ್ಯದ ಜೊತೆಗೆ ಸಮುದಾಯದ ಆರೋಗ್ಯವೂ ವೃದ್ಧಿಸುತ್ತದೆ. ಯುಗಾದಿಯು ರೋಗಮುಕ್ತ ಸಮಾಜದ ಪರಿಕಲ್ಪನೆಯನ್ನು ಜಾಗೃತಗೊಳಿಸುವ ಹಬ್ಬವೆಂದರೆ ಅತಿಶಯೋಕ್ತಿ ಆಗದು.
ಬೇವು ಬೆಲ್ಲದ ಮಹತ್ವ: ಯುಗಾದಿಯ ವಿಶೇಷ ಆಕರ್ಷಣೆ ಬೇವು ಮತ್ತು ಬೆಲ್ಲ. ಇದನ್ನು ಬಹುತೇಕ ಎಲ್ಲರೂ ಉತ್ಸಾಹದಿಂದ ತಯಾರಿಸಿ ತಮ್ಮವರಿಗೆ ಹಂಚಿ ತಿನ್ನುವ ಆಚರಣೆಯನ್ನು ಸ್ವಲ್ಪ ಅವಲೋಕಿಸಿದರೆ ಇದರ ಹಿಂದಿರುವ ವಿಶಾಲವಾದ ದೀರ್ಘಕಾಲಿಕ ಪರಿಣಾಮಗಳನ್ನು ಅರ್ಥೈಸಿಕೊಳ್ಳಬಹುದು. ಆರೋಗ್ಯದ ದೃಷ್ಟಿಯಿಂದ ಬೆಲ್ಲವು ದೇಹಕ್ಕೆ ಇಂಧನ ನೀಡುತ್ತದೆ, ಬೇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಬಹುತೇಕ ರೋಗಗಳಿಗೆ ರಾಮಬಾಣವಾಗಿದೆ ಎಂದು ಅನೇಕ ಸಂಶೋಧನೆಗಳಿಂದ ದೃಢಪಟ್ಟಿದೆ. ರೋಗದ ಸೋಂಕಿನಿಂದ ಕೂಡ ರಕ್ಷಣೆ ನೀಡುವ ಬೇವು ನಮ್ಮನ್ನು ಬಲಿಷ್ಠವಾಗಿಸುತ್ತದೆ. ಸುಖ, ದುಃಖಗಳು ಪ್ರಸ್ತುತ ವರ್ಷದಲ್ಲಿ ಎದುರಾದರೆ ಅವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಎದೆ ಗುಂದಬಾರದು, ಅದಮ್ಯವಾದ ಆತ್ಮವಿಶ್ವಾಸವನ್ನು ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಎದುರಾಗುವ ಪರೀಕ್ಷೆಗಳನ್ನು ದಿಟ್ಟತನದಿಂದ ಎದುರಿಸಿ ಯಶಸ್ಸನ್ನು ಗಳಿಸಬೇಕು. ಬೇವು ಬೆಲ್ಲ ಎಂಬುದು ಮಳೆಗಾಲದಲ್ಲಿ ಛತ್ರಿಯನ್ನು ಉಪಯೋಗಿಸಿದ ಹಾಗೆ. ಛತ್ರಿಯಿಂದ ಮಳೆಯನ್ನು ನಿಲ್ಲಿಸಲು ಆಗುವುದಿಲ್ಲ, ಬದಲಾಗಿ ನಮ್ಮನ್ನು ರಕ್ಷಿಸಿಕೊಳ್ಳಬಹುದು, ಅದೇ ರೀತಿಯಲ್ಲಿ ಆತ್ಮವಿಶ್ವಾಸ ಮೈಗೂಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಿಕ್ಕಿಯೇ ಸಿಗುತ್ತದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಬದಲಾಗಿ ಜೀವನದಲ್ಲಿ ಉಂಟಾಗುವ ಯಾವುದೇ ಸನ್ನಿವೇಶಗಳನ್ನು ಎದುರಿಸಲು ಧೈರ್ಯ ಲಭಿಸುತ್ತದೆ. ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣ ಹೇಳುವ ಹಾಗೆ ಗೆದ್ದರೆ ಹಿಗ್ಗಬಾರದು, ಸೋತರೆ ಕುಗ್ಗಬಾರದು ಎಂಬ ವಿಚಾರವನ್ನು ಬೇವು ಬೆಲ್ಲದ ಜೊತೆಗೆ ಸಮೀಕರಿಸಬಹುದು.
ಪಂಚಾಂಗ ಶ್ರವಣದ ಹಿನ್ನಲೆ: ಯುಗಾದಿಯ ದಿನ ನಡೆಯುವ ಪಂಚಾಂಗ ಶ್ರವಣವು ಈ ಸಂವತ್ಸರದಲ್ಲಿ ಮಳೆಗಾಲ ಹೇಗಿರಲಿದೆ? ಎಷ್ಟು ಪ್ರಮಾಣದಲ್ಲಿ ಮಳೆಯು ಬೀಳಲಿದೆ, ಧವಸ ಧಾನ್ಯಗಳ ಧಾರಣೆ ಗಗನಕ್ಕೆ ಏರುವುದೇ? ಪಾತಾಳಕ್ಕೆ ಇಳಿಯುವುದೇ ಎಂಬ ಮುನ್ಸೂಚನೆ ಪಂಚಾಂಗದ ಶ್ರವಣದಿಂದ ಲಭಿಸಲಿದೆ. ಇವುಗಳಿಂದ ದೇಶದ ಆರ್ಥಿಕತೆಯ ಮೇಲೆ ಯಾವ ರೀತಿಯ ಪರಿಣಾಮಗಳು ಉಂಟಾಗಲಿವೆ? ಗ್ರಹ ನಕ್ಷತ್ರಗಳ ಆಧಾರದಲ್ಲಿ ದೇಶದಲ್ಲಿ ಆಡಳಿತ ಹೇಗಿರುವುದು? ಸುಭಿಕ್ಷೆ ಇರುವುದೇ? ಪ್ರಸ್ತುತ ವರ್ಷದಲ್ಲಿ ಸಂಭವಿಸಲಿರುವ ಗ್ರಹಣಗಳ ಸಂಕ್ಷಿಪ್ತ ಮಾಹಿತಿಯೂ ಪಂಚಾಂಗ ಶ್ರವಣದಿಂದ ಹೊರಹೊಮ್ಮುತ್ತದೆ. ಇತಿಹಾಸದಲ್ಲಿ ಒಮ್ಮೆಯಾದರೂ ಪಂಚಾಂಗದಲ್ಲಿ ಉಲ್ಲೇಖಿಸಿದ ಗ್ರಹಣಗಳ ಸಮಯದಲ್ಲಿ ಕೊಂಚ ಬದಲಾವಣೆಯೂ ಆಗಲಿಲ್ಲ, ಸಂಪೂರ್ಣವಾಗಿ ನಿಖರತೆಯಿಂದ ಕೂಡಿತ್ತು. ಬಹುತೇಕವಾಗಿ ಮಳೆಯ ಪ್ರಮಾಣದಲ್ಲಿ ಕೂಡ ಸಾಮ್ಯತೆ ಇತ್ತು ಮತ್ತು ಇವೆ. ಇವುಗಳನ್ನೆಲ್ಲಾ ಸೂಕ್ಷ್ಮವಾಗಿ ಅವಲೋಕಿಸಿದರೆ ನಮ್ಮ ಪೂರ್ವಜರು ಅದೆಷ್ಟೋ ಸಾವಿರ ವರ್ಷಗಳ ಮೊದಲೇ ಈ ವರ್ಷ ಸಂಭವಿಸುವ ಅನೇಕ ಘಟನಾವಳಿಗಳನ್ನು ಯಾವುದೇ ಗೂಗಲ್ ಅಥವಾ ಇನ್ನಿತರ ಅಂತರ್ಜಾಲ ಮಾಧ್ಯಮವನ್ನು ಬಳಸದೇ, ತಮ್ಮ ಅಗಾಧ ಜ್ಞಾನ ಭಂಡಾರ ಉಪಯೋಗಿಸಿ ಪ್ರತಿಪಾದಿಸಿದ ವಿಚಾರ ಭಾರತದ ಹಿರಿಮೆಯನ್ನು ವಿಶ್ವದಾದ್ಯಂತ ಪಸರಿಸಲು ಹಿಡಿದ ಕೈಗನ್ನಡಿಯಾಗಿದೆ. ಇದನ್ನು ಮತ್ತೊಮ್ಮೆ ಸಾಬೀತುಪಡಿಸಲು, ಪುನಃ ನೆನಪಿಸಲು, ಅವರ ಬಗ್ಗೆ ಹೆಮ್ಮೆ ಪಡಲು ಕೂಡ ಯುಗಾದಿಯು ವೇದಿಕೆಯಾಗಿದೆ.
ಪಂಚಾಂಗದ ಕೊನೆಯಲ್ಲಿ ಇರುವ ಸಾಲು ‘ಇದನ್ನು ಶ್ರದ್ಧೆಯಿಂದ ಓದಿದವರಿಗೂ, ಕೇಳಿದವರಿಗೂ ಈ ಸಂವತ್ಸರದ ಫಲವು ಪ್ರಾಪ್ತಿಯಾಗಲಿ, ಅವರಿಗೆ ಶುಭವಾಗಲಿ, ಭಗವಂತನು ಅವರಿಗೆ ಸನ್ಮಂಗಲ ನೀಡಲಿ’ ಎಂಬ ವಿಚಾರದ ಬಗ್ಗೆ ಸ್ವಲ್ಪ ಬೆಳಕನ್ನು ಚೆಲ್ಲಿದರೆ ನಮ್ಮ ಪೂರ್ವಜರು ಪಂಚಾಂಗವನ್ನು ಬರೆದಿರುವಾಗ ಭವಿಷ್ಯದಲ್ಲಿ ಈ ಸಾಲುಗಳು ಸಮಾಜದಲ್ಲಿ ಶಾಂತಿಯನ್ನು ಸ್ಥಾಪಿಸಲು ನಾಂದಿಯಾಗಲಿ, ಬೇಧ ಭಾವ ತೊಡೆದು ಹಾಕಿ ಸಮಾನತೆಯ ಮೊಳಕೆ ಒಡೆಯಲಿ ಎಂಬ ಅವರ ದೀರ್ಘಕಾಲಿಕ ಉದ್ದೇಶಗಳು ತಿಳಿಯುತ್ತದೆ. ಸರ್ವೇ ಜನಃ ಸುಖಿನೋ ಭವಂತು ಎಂಬುದು ಭಾರತ ದೇಶದ ವಿಶ್ವ ಭ್ರಾತೃತ್ವ ಮಂತ್ರದ ಉಗಮವೂ ಇದರಿಂದ ಆಗಿರಬಹುದು ಎಂದರೆ ತಪ್ಪಾಗಿರಲಿಕ್ಕಿಲ್ಲ. ಒಟ್ಟಿನಲ್ಲಿ ಯುಗಾದಿ ಹಬ್ಬದ ಆಚರಣೆಯನ್ನು ಬಹು ಆಯಾಮಗಳಿಂದ ವಿಶ್ಲೇಷಿಸಿದರೆ ಈ ಐತಿಹಾಸಿಕ ಹಬ್ಬದ ಬಹುಶಿಸ್ತೀಯ ಕಾಳಜಿ, ಒಳಾರ್ಥಗಳು ಮನದಟ್ಟಾಗಿ ಸಾತ್ವಿಕ ಸಮಾಜದ ನಿರ್ಮಾಣದಲ್ಲಿ ಈ ಹಬ್ಬದ ಕೊಡುಗೆಯನ್ನು ಅನಾವರಣಗೊಳಿಸುತ್ತದೆ. ನಿಮಗೆಲ್ಲರಿಗೂ ಯುಗಾದಿ ಶುಭಾಶಯಗಳು. ಎಲ್ಲರಿಗೂ ಶುಭವಾಗಲಿ, ದೇಶದಲ್ಲಿ ಸುವಿಚಾರದ ಪ್ರವಾಹವು ಹರಿಯಲಿ, ದೇಶದ ಕೀರ್ತಿ ಜಾಗತಿಕ ಮಟ್ಟದಲ್ಲಿ ಬಾನೆತ್ತರಕ್ಕೇರಲಿ.
-ಗಣೇಶ್ ಪ್ರಸಾದ್ ಜಿ. ನಾಯಕ್