ಮಣಿಪಾಲ, ಜ.22: ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸುವುದರಿಂದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳು ಬ್ಯಾಂಕ್ ಗಳು ಹಾಗೂ ಸಂಜೀವಿನಿ ಸ್ವ ಸಹಾಯ ಗುಂಪುಗಳ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಗಳು ಜನ ಸಾಮಾನ್ಯರಿಗೆ ತಲುಪುವಲ್ಲಿ ಎಲ್ಲಾ ಬ್ಯಾಂಕರ್ಸ್ ಕಾರ್ಯ ಪ್ರವೃತ್ತಾರಾಗ ಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ. ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಜಿಲ್ಲಾ ಪಂಚಾಯತ್, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಜಿಲ್ಲಾ ಪಂಚಾಯತ್ ಉಡುಪಿಯ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಏರ್ಪಡಿಸಿದ್ದ, ಒಂದು ದಿನದ ಬ್ಯಾಂಕರ್ಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಗಾರದಲ್ಲಿ ಎನ್.ಐ.ಆರ್.ಡಿ ಸಂಸ್ಥೆಯ ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಅಭಿಷೇಕ್ ಅವರು ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕ್ ಸಾಲ, ಮಹಿಳಾ ಉದ್ಯಮದಾರರಿಗೆ ಬ್ಯಾಂಕ್ ಸಾಲ ಸಂಪರ್ಕ, ಹಣಕಾಸು ಸೇರ್ಪಡೆ, ಹಣಕಾಸು ಸಾಕ್ಷರತೆ ಗ್ರಾಮೀಣ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಜಿಲ್ಲೆಯ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರುಗಳಿಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕ್ ಸಾಲ ಒದಗಿಸುವ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ನಾವೆಲ್ಲರೂ ಜೊತೆಯಾಗಿ ಸಮನ್ವಯತೆ ಯಿಂದ ಸೇವೆ ಸಲ್ಲಿಸಬೇಕಾಗುತ್ತದೆ ಎಂದರು. ಯೋಜನಾ ನಿರ್ದೇಶಕರಾದ ಶ್ರೀನಿವಾಸ್ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಉಪಸ್ಥಿತರಿದ್ದರು. ಅಲೆವೂರು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸದಸ್ಯರು ಪ್ರಾರ್ಥನೆಗೈದರು, ಎನ್.ಆರ್.ಎಲ್.ಎಮ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ನವ್ಯಾ ಕಾರ್ಯಕ್ರಮ ನಿರೂಪಿಸಿದರು. ಎನ್.ಆರ್.ಎಲ್.ಎಮ್ ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್ ವಂದಿಸಿದರು.