ಮಂಗಳೂರು, ಜ.17: ಕೋಟೆಕಾರ್ ಉಳ್ಳಾಲದ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ತುರ್ತು ಸಭೆ ನಡೆಸಿದರು.
ಶೀಘ್ರ ಆರೋಪಿಗಳ ಪತ್ತೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ದರೋಡೆ ಮಾಡಿ ಆರೋಪಿಗಳು ಇಷ್ಟು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ? ಎಷ್ಟೆಲ್ಲಾ ಟೋಲ್ ಗಳನ್ನು ದಾಟಿ ಹೋಗಿದ್ದಾರೆ, ತಕ್ಷಣ ಟೋಲ್ ಗಳನ್ನು ಏಕೆ ಬಿಗಿ ಮಾಡಲಿಲ್ಲ? ಎಲ್ಲಾ ಟೋಲ್ ಗಳಲ್ಲೂ ಬಿಗಿ ತಪಾಸಣೆ ನಡೆಸಬೇಕು. ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಕಾಬಂಧಿ ಹಾಕಿ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಪ್ಪಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.