ಉಡುಪಿ, ಜ.17: ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದ ಭಜನಾ ಸಪ್ತಾಹ ಸಮಿತಿಯ ಅಧ್ಯಕ್ಷ ಕೆ. ತುಳಸಿದಾಸ್ ರಾಮಕೃಷ್ಣ ಕಿಣಿ ಅವರು ಶುಕ್ರವಾರ ಮುಂಜಾನೆ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಚತುರ ಸಂಘಟಕ: ಕೆನರಾ ಬ್ಯಾಂಕ್ ನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಕೆ.ತುಳಸಿದಾಸ್ ಕಿಣಿ ಅವರ ಬಹುತೇಕ ಸೇವಾ ಅವಧಿ ಮುಂಬಯಿಯಲ್ಲಿತ್ತು. ಮುಂಬಯಿಯ ಹಲವಾರು ಶಾಖೆಗಳಲ್ಲಿ ಮ್ಯಾನೇಜರ್ ಆಗಿ ಅವರು ಕಾರ್ಯನಿರ್ವಹಿಸಿದ್ದರು. ಮುಂಬಯಿ ಜಿ.ಎಸ್.ಬಿ ಸೇವಾ ಮಂಡಲ, ವಾಲ್ಕೇಶ್ವರ ಕಾಶೀ ಮಠ ಹೀಗೆ ಹತ್ತು ಹಲವು ಸಂಘಟನೆಗಳಲ್ಲಿ ಕ್ರಿಯಾಶೀಲವಾಗಿ ಗುರುತಿಸಿಕೊಂಡು ಚತುರ ಸಂಘಟಕರಾಗಿದ್ದರು.
ಯಾತ್ರಿ ನಿವಾಸ ರೂವಾರಿ: ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದ ಸುಸಜ್ಜಿತ ಯಾತ್ರಿ ನಿವಾಸದ ನಿರ್ಮಾಣದಲ್ಲಿ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡಿದ್ದ ಇವರು ಅತ್ಯಂತ ಕಡಿಮೆ ಅವಧಿಯಲ್ಲಿ ಅದನ್ನು ಪೂರ್ಣಗೊಳಿಸಿದರು. ಯಾತ್ರಿ ನಿವಾಸವನ್ನು ಕಾಶೀ ಮಠಾಧೀಶರಾದ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ ಉದ್ಘಾಟಿಸಿದ್ದರು.