ಕಾಪು, ಜ.11: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಫೆಬ್ರವರಿ 25 ರಿಂದ ಮಾರ್ಚ್ 5 ರವರೆಗೆ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಕಾಪು ಪುರಸಭೆಯ ಸದಸ್ಯರು ಹಾಗೂ ಇಲಾಖಾಧಿಕಾರಿಗಳೊಂದಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಭೆ ನಡೆಸಿದರು. 10 ದಿನಗಳ ಕಾಲ ನಡೆಯಲಿರುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗವಹಿಸಿರುವುದರಿಂದ ಮೂಲಸೌಕರ್ಯ ವ್ಯವಸ್ಥೆ ಹಾಗೂ ಶುಚಿತ್ವ ಮತ್ತು ವಾಹನ ನಿಲುಗಡೆಗೆ ಜೊತೆಗೆ ವಾಹನಗಳ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಕಾಪು ಪುರಸಭೆಯ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷರಾದ ಸರಿತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಾಸುದೇವ ಶೆಟ್ಟಿ, ಕಾಪು ಪುರಸಭೆಯ ಮುಖ್ಯಾಧಿಕಾರಿಗಳಾದ ನಾಗರಾಜ್ ಹಾಗೂ ಪುರಸಭೆ ಸದಸ್ಯರು, ಅಧಿಕಾರಿಗಳು, ಹೊಸಮಾರಿಗುಡಿಯ ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.