ಯು.ಬಿ.ಎನ್.ಡಿ., ಜ.8: ತಿರುಮಲ ಬೆಟ್ಟದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ವೈಕುಂಠ ದ್ವಾರ ದರ್ಶನಕ್ಕಾಗಿ ಟಿಕೆಟ್ ಕೌಂಟರ್‌ಗಳಲ್ಲಿ ಬುಧವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಲ್ತುಳಿತದಲ್ಲಿ ಮೃತಪಟ್ಟವರ ಪೈಕಿ ಮೂವರು ಮಹಿಳೆಯರು ಸೇರಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತೀವ್ರ ಆಘಾತವನ್ನು ವ್ಯಕ್ತಪಡಿಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಶ್ರೀವಾರಿ ವೈಕುಂಠ ದ್ವಾರಕ್ಕೆ ಭೇಟಿ ನೀಡಲು ಟೋಕನ್‌ಗಾಗಿ ತಿರುಪತಿಯ ವಿಷ್ಣು ನಿವಾಸದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಹಲವಾರು ಭಕ್ತರು ಸಾವನ್ನಪ್ಪಿರುವುದು ನನಗೆ ಆಘಾತವನ್ನುಂಟು ಮಾಡಿದೆ. ಟೋಕನ್‌ಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಸಮಯದಲ್ಲಿ ದುರಂತ ಘಟನೆ ಸಂಭವಿಸಿದು ಬೇಸರದ ಸಂಗತಿ ಎಂದಿದ್ದಾರೆ. ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ನಾಯ್ಡು, ಘಟನೆಯಲ್ಲಿ ಗಾಯಗೊಂಡವರಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು ವಿಚಾರಿಸಿದರು. ಜನವರಿ 10 ರಿಂದ ಆರಂಭವಾಗುವ 10 ದಿನಗಳ ವೈಕುಂಠ ದ್ವಾರ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು.