ಮೂಡುಬಿದಿರೆ, ಡಿ.14: ವ್ಯಕ್ತಿತ್ವ ರಚನಾ ವ್ಯವಸ್ಥೆಯೇ ಶಿಸ್ತು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತನ್ನು ಅಳವಡಿಸಲು ಕಲಿಸುತ್ತದೆ ಎಂದು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗುಬ್ಬಿಗೂಡು ರಮೇಶ್ ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಹಯೋಗಿತ್ವದಲ್ಲಿ ೩೦ ನೇ ಆಳ್ವಾಸ್ ವಿರಾಸತ್ ಸಂಧರ್ಭದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್-ರೇಂಜರ್ಸ್ ಸಾಂಸ್ಕೃತಿಕ ಉತ್ಸವ-೨೦೨೪ರ ಅಂಗವಾಗಿ ರತ್ನಾಕರವರ್ಣಿ ವೇದಿಕೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಶನಿವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಈ ಯುಗದ ವಿದ್ಯಾರ್ಥಿಗಳು ತಂತ್ರಜ್ಞಾನದ ಜೊತೆಗೆಯೇ ಹುಟ್ಟಿದವರು ಹಾಗಾಗಿ ಇವರಿಗೆ ಸಂಪೂರ್ಣ ಜಗತ್ತಿನ ಪರಿಚಯವಿದೆ. ಅಂಗೈಯಲ್ಲಿ ಆಕಾಶವಿದೆ, ಜಾಗತೀಕರಣದ ಅರಿವಿದೆ. ಅದರಲ್ಲೂ ಕರ್ನಾಟಕ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದರು. ಪಾಠ, ಪರೀಕ್ಷೆಯ ಜೊತೆಗೆ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಒಡನಾಟ ಬೇಕು. ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಎಸ್‌ಎಸ್, ಎನ್‌ಸಿಸಿ, ಕ್ರೀಡೆ ನಾಟಕ ಮುಂತಾದ ಪಠ್ಯೇತರ ವಿಷಯಗಳಲ್ಲಿ ತೊಡಗಿಸಿಕೊಳ್ಳಬೇಕು. ನಾವು ನಮ್ಮನ್ನು ಸಾಂಸ್ಕೃತಿಕ ಒಡನಾಟಗಳಲ್ಲಿ ತೊಡಗಿಸಿರುವುದರಿಂದ ನಮ್ಮನ್ನು ಅಖಂಡ ಕರ್ನಾಟಕ ಗುರುತಿಸಿದೆ ಎಂದರು. ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳಿಸಿಕೊಳ್ಳಿ. ನೀವು ಕಾಣುವ ಕನಸುಗಳಿಗೆ ಪ್ರತಿಫಲದ ನಿರೀಕ್ಷೆ ಇಟ್ಟುಕೊಳ್ಳಿ. ನಿಮ್ಮ ಆಸಕ್ತಿಯ ಮಜಲನ್ನು ಆರಿಸಿಕೊಳ್ಳಿ. ಜೀವನದ ಹೆದ್ದಾರಿಯಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಿ ಎಂದರು.
ನಾಲ್ವಡಿ ಕೃಷ್ಣರಾಜರ ಕೊಡುಗೆಗಳನ್ನು ನೆನಪಿಸಿ ಸಮಾಜಮುಖಿಯಾಗಿರುವವರನ್ನು ಸಮಾಜ ನೆನಪಿಸಿಕೊಳುತ್ತದೆ. ಬಯಸಿದ್ದನ್ನು ಸಾಧಿಸಲು ಜೀವನದಲ್ಲಿ ಸಾತ್ವಿಕ ಸಿಟ್ಟನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು. ಗುಬ್ಬಿ ಗೂಡು ಸಾಂಸ್ಕೃತಿಕ ಸಿರಿ ಎಲ್ಲಾ ಕಡೆಗಳಲ್ಲೂ ಅಸ್ತಿತ್ವಕ್ಕೆ ಬರಲಿದೆ. ಕರ್ನಾಟಕ ಸಾಂಸ್ಕೃತಿಕ ಗೂಡನ್ನು ಕರ್ನಾಟಕದಲ್ಲಿ ಕಟ್ಟುತ್ತೇನೆ ಎಂಬ ಭರವಸೆ ನೀಡಿದರು. ಸ್ಕೌಟ್ಸ್ – ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್. ಸಿಂಧಿಯಾ ಮಾತನಾಡಿ ಭಾರತಕ್ಕೆ ಮಾದರಿಯಾಗುವ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನ ಮಂಗಳೂರಿನ ಪಿಲಿಕುಳದಲ್ಲಿ ನಿರ್ಮಾಣವಾಗಿದೆ. ಗುಣಮಟ್ಟದ ಸ್ಕೌಟ್ಸ್-ಗೈಡ್ಸ್ ಮತ್ತು ರೋವರ್ಸ್ ರೇಂಜರ್ಸ್ ಸಾಂಸ್ಕೃತಿಕ ಉತ್ಸವ ಆಳ್ವಾಸ್ ನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಶಿಬಿರದ ಮೇಲ್ವಿಚಾರಕಿ ಮಲ್ಲೇಶ್ವರಿ ಜೂಜಾರೆ ಮತ್ತು ನಿತಿನ್ ಅಮೀನ್, ಬೆಂಗಳೂರಿನ ಚಲ್ಲಯ್ಯ ಇದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ಉಪನ್ಯಾಸಕಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.