ಉಡುಪಿ, ಡಿ.13: ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಕ್ರಿಯೆಗಳು ಕುಂಠಿತವಾಗಿ ನಡೆಯುತ್ತಿವೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನಾನುಕೂಲ ಉಂಟಾಗಿವೆ. ಕಾಮಗಾರಿಯ ವೇಗದ ಮಿತಿಯನ್ನು ಹೆಚ್ಚಿಸಿ, ಶೀಘ್ರದಲ್ಲಿ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 66, 169 ಹಾಗೂ 169ಎ ರಲ್ಲಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು, ಅಸಮರ್ಪಕ ದಾರಿದೀಪ ನಿರ್ವಹಣೆ, ಚರಂಡಿಗಳ ನಿರ್ಮಾಣ, ಪಾದಚಾರಿ ಮಾರ್ಗದಲ್ಲಿ ಇಂಗು ಗುಂಡಿಗಳು ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಚರ್ಚಿಸುವ ಸಲುವಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಗತ್ಯವಿರುವ ಭೂಮಿಯ ಸ್ವಾಧೀನ ಪ್ರಕ್ರಿಯೆ ಕಾರ್ಯವು ತುಂಬಾ ವಿಳಂಬವಾಗುತ್ತಿದೆ. ಭೂಮಿಯ ಮಾಲೀಕರುಗಳಿಗೆ ವೈಜ್ಞಾನಿಕವಾಗಿ ಪರಿಹಾರದ ಮೊತ್ತವನ್ನು ಆದ್ಯತೆಯ ಮೇಲೆ ನೀಡಿ, ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಭಿಯಂತರರಿಗೆ ಸೂಚನೆ ನೀಡಿದರು. ಭೂ ಸ್ವಾಧೀನ ಪ್ರಕ್ರಿಯೆಯ ವಿಳಂಬದಿಂದಾಗಿ ಕಾಮಗಾರಿಯನ್ನು ಕೈಗೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಪ್ರತೀ ಹದಿನೈದು ದಿನಗಳಿಗೊಮ್ಮೆ ಸಭೆ ಕರೆದು ಆಗಿರುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿಯನ್ನು ಕೇಳಿರುತ್ತಾರೆ. ಆದರೆ, ಸ್ವಾಧೀನ ಪ್ರಕ್ರಿಯೆ ಕಾರ್ಯವು ನಿರೀಕ್ಷಿತ ಮಟ್ಟದಲ್ಲಿ ಆಗಿರುವುದಿಲ್ಲ. ಇದಕ್ಕೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದ ಅವರು, ಮುಂದಿನ ಹತ್ತು ದಿನಗಳ ಒಳಗಾಗಿ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದರು. ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾರ್ಯಕ್ಕೆ ನಿರ್ಮಾಣ ಮಾಡುತ್ತಿರುವ ಕಬ್ಬಿಣದ ಗರ್ಡಲ್ಸ್ನ ಕಾರ್ಯವೂ ಮಂದಗತಿಯಲ್ಲಿ ಸಾಗಿದೆ. ಈ ಹಿಂದೆ ಡಿಸೆಂಬರ್ 25 ರ ಒಳಗಾಗಿ ಅದನ್ನು ಅಳವಡಿಸುವುದಾಗಿ ಸಭೆಗೆ ತಿಳಿಸಲಾಗಿತ್ತು. ಆದರೆ, ಈ ಕಾರ್ಯವು ಒಪ್ಪಿಕೊಂಡಂತಹ ವೇಳೆಯಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲದೇ ಇರುವುದು ಕಂಡುಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಅಭಿಯಂತರರು ಹಾಗೂ ರೈಲ್ವೇ ಇಲಾಖೆಯ ಅಭಿಯಂತರರು ಒಬ್ಬರ ಮೇಲೊಬ್ಬರು ಹೇಳಿಕೊಂಡು ಹೋಗುತ್ತಿರುವುದು ಸರಿಯಲ್ಲ. ಕಾಮಗಾರಿಯ ಪ್ರಗತಿಯ ವೇಗವನ್ನು ಹೆಚ್ಚಿಸಲು ಎರಡೂ ಇಲಾಖೆಯ ಅಧಿಕಾರಿಗಳೂ ಸಮನ್ವಯದೊಂದಿಗೆ ಕಾರ್ಯನಿವಹಿಸಬೇಕು ಎಂದು ತಿಳಿಸಿದರು.
ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿಗಳನ್ನು ಮಾರ್ಚ್ ತಿಂಗಳ ಮುಂಚಿತವಾಗಿಯೇ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಬೇಕು ಎಂದ ಅವರು, ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಕಾಮಗಾರಿಗಳನ್ನು ಸಹ ಆದ್ಯತೆಯ ಮೇಲೆ ಕೈಗೊಂಡು ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಡಿಎಫ್‌ಓ ಗಣಪತಿ ಹಾಗೂ ವೈಲ್ಡ್ಲೈಫ್ ಡಿ.ಎಫ್.ಓ ಶಿವರಾಮ ಎಂ ಬಾಬು, ಸಹಾಯಕ ಕಮೀಷನರ್ ಮಹೇಶ್ಚಂದ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಶೃಂಗೇರಿ-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಗುತ್ತಿಗೆದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.