ಕಾರ್ಕಳ, ನ.15: ಗಣಿತವೇ ಸತ್ಯ, ಅದು ತರ್ಕಕ್ಕೆ ನಿಕಶವಾದದ್ದು. ಗಣಿತವೇ ಬದುಕು. ಗಣಿತವನ್ನು ಪ್ರೀತಿಸುತ್ತ ಕಲಿಸಿದರೆ ಮಕ್ಕಳು ಗಣಿತವನ್ನು ಪ್ರೀತಿಸುತ್ತಾರೆ. ಅದರಿಂದ ಮುಂದೆ ಉತ್ತಮ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯ ಆಗುತ್ತದೆ ಎಂದು ಕಾರ್ಕಳ ಗಣಿತನಗರದ ಜ್ಞಾನಸುಧ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಡಾ. ಸುಧಾಕರ ಶೆಟ್ಟಿ ಅವರು ಅಭಿಪ್ರಾಯಪಟ್ಟರು. ಅವರು ಕಾರ್ಕಳದ ಶ್ರೀ ಮದ್ಭುವನೇಂದ್ರ ಪ್ರೌಢಶಾಲೆಯಲ್ಲಿ ನಡೆದ ಕಾರ್ಕಳ ಶೈಕ್ಷಣಿಕ ವಲಯದ ಪ್ರೌಢಶಾಲೆಗಳ ಗಣಿತ ಅಧ್ಯಾಪಕರ ಒಂದು ದಿನದ ಸಂಪದೀಕರಣ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ಮಾತಾಡುತ್ತಿದ್ದರು.
ಅದೇ ಕಾರ್ಯಕ್ರಮದಲ್ಲಿ ಅವರು ಬ್ರಹ್ಮಾವರದ ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ನಿವೃತ್ತ ಗಣಿತ ಶಿಕ್ಷಕರಾದ ಹರಿಕೃಷ್ಣ ಹೊಳ್ಳ ಅವರನ್ನು ಕಾರ್ಕಳ ಗಣಿತ ಶಿಕ್ಷಕರ ವೇದಿಕೆಯ ಮೂಲಕ ಸನ್ಮಾನಿಸಿದರು. ಹರಿಕೃಷ್ಣ ಹೊಳ್ಳ ಅವರು ಸನ್ಮಾನಕ್ಕೆ ಉತ್ತರಿಸಿ ಪರಸ್ಪರ ಪ್ರೀತಿಯಿಂದ ಸಂಸ್ಥೆಗಳನ್ನು ಬೆಳೆಸಲು ಸಾಧ್ಯ ಎಂದು ಹೇಳಿದರು. ಕಾರ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಉತ್ತಮ ಫಲಿತಾಂಶ ಪಡೆಯಲು ಮಾರ್ಗದರ್ಶಿ ಸೂತ್ರಗಳನ್ನು ನೀಡಿದರು. ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯು ಈ ತರಬೇತಿಯನ್ನು ಆಯೋಜನೆ ಮಾಡಿತ್ತು. ಭುವನೇಂದ್ರ ಹೈಸ್ಕೂಲಿನ ಮುಖ್ಯಶಿಕ್ಷಕ ಆರ್ ನಾರಾಯಣ ಶೆಣೈ ಅವರು ಸ್ವಾಗತಿಸಿದರು. ಸಂಪನ್ಮೂಲ ಶಿಕ್ಷಕರಾದ ಹರೀಶ್ ಶೆಟ್ಟಿ, ಮಂಜುನಾಥ್ ಮತ್ತು ಶಿಕ್ಷಕರ ಸಂಘದ ಅಧ್ಯಕ್ಷ ಆನಂದ್ ಅವರು ವೇದಿಕೆಯಲ್ಲಿದ್ದರು. ರಾಜೇಂದ್ರ ಭಟ್ ಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.