ಮಂಗಳೂರು, ನ.14: ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜನರ ಪ್ರಾಣವನ್ನು ಉಳಿಸಬಹುದು ಆದುದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದು ಕೆಎಂಸಿ ಅತ್ತಾವರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಂಜಿತ ರಾವ್ ಹೇಳಿದರು. ಅವರು ಗುರುವಾರ ಅತ್ತಾವರ ಕೆಎಂಸಿ ಆಸ್ಪತ್ರೆ ಮತ್ತು ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ನೇತೃತ್ವದಲ್ಲಿ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್, ಯುವ ರೆಡ್ ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತವನ್ನು ಯಾವುದೇ ಸೈನ್ಸ್ ಲ್ಯಾಬಿನಲ್ಲಿ ತಯಾರಿಸಲು ಆಗುವುದಿಲ್ಲ. ರಕ್ತದ ಅಗತ್ಯವಿದ್ದಾಗ ಮತ್ತೊಬ್ಬರು ದಾನ ಮಾಡಬೇಕು. ರಕ್ತವನ್ನು ನಾವು ಉತ್ಪಾದಿಸಲು ಸಾಧ್ಯವಿಲ್ಲ. ಅಪಘಾತದ ಸಂದರ್ಭದಲ್ಲಿ ರಕ್ತವು ಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ಸಣ್ಣ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕೆಲ ರಕ್ತ ಹೀನತೆ ಕಾಯಿಲೆ, ಕ್ಯಾನ್ಸರ್, ಡೆಂಗ್ಯೂ, ಮಲೇರಿಯಾ ಮೊದಲಾದ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದ್ದು, ಆ ಸಂದರ್ಭದಲ್ಲಿ ರಕ್ತವನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ರಕ್ತ ದಾನ ಮಾಡಿದಂತಹ ರಕ್ತವನ್ನು ಸಂಗ್ರಹಿಸಿ ಇಟ್ಟಿದ್ದು, ಅಗತ್ಯ ಸಂದರ್ಭದಲ್ಲಿ ಈ ರಕ್ತ ನೆರವಿಗೆ ಬರುತ್ತದೆ. ರಕ್ತ ದಾನದಿಂದ ಹಳೆ ರಕ್ತ ಹೋಗಿ ೪೮ ಗಂಟೆಗಳಲ್ಲಿ ಹೊಸ ರಕ್ತ ಸಂಗ್ರಹವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಎಂ. ವಹಿಸಿ ಮಾತನಾಡಿ, ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ನಿರ್ವಹಿಸುವುದು ಅವಶ್ಯಕ. ಆದುದರಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಇರುವ ಸಮಸ್ಯೆಯನ್ನು ಪತ್ತೆ ಹಚ್ಚಲು ಮತ್ತು ಅದಕ್ಕೆ ಬೇಕಾದ ಸಲಹೆಗಳನ್ನು ಪಡೆದುಕೊಳ್ಳಲು ಈ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು. ಐಕ್ಯೂಎಸಿ ಸಹ ಸಂಯೋಜಕಿ ಡಾ. ಜೋತಿಪ್ರಿಯ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ಸುಧಾಕರನ್ ಟಿ. ಯುವ ರೆಡ್ ಕ್ರಾಸ್ ನ ಸಂಯೋಜಕರುಗಳಾದ ಡಾ. ಜೋತಿ ಪಿ. ಡಾ. ಅಶೋಕ ಸಿ.ಹೆಚ್., ನಯನ ಕುಮಾರಿ, ರೋವರ್ಸ್ ಮತ್ತು ರೇಂಜರ್ಸ್ನ ಸಂಯೋಜಕರುಗಳಾದ ಡಾ. ಅಪರ್ಣಾ ಆಳ್ವಾ, ಡಾ. ಪುರುಷೋತ್ತಮ ಭಟ್, ಎನ್.ಎಸ್.ಎಸ್.ನ ಯೋಜನಾಧಿಕಾರಿಗಳಾದ ಡಾ. ಲೋಕೇಶ್ ನಾಥ್, ಶಾಂತಿ, ಡಾ. ಮೋಹನ್ ದಾಸ್ ಉಪಸ್ಥಿತರಿದ್ದರು. ಸ್ವಯಂ ಸೇವಕರುಗಳಾದ ಕಾವ್ಯ ಸ್ವಾಗತಿಸಿದರು. ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿ, ನೇತ್ರಾವತಿ ವಂದಿಸಿದರು. ರಕ್ತದಾನ ಶಿಬಿರದಲ್ಲಿ ಒಟ್ಟು ೧೦೯ ಯುನಿಟ್ ರಕ್ತ ಸಂಗ್ರಹವಾಯಿತು. ೩೦೬ ಮಂದಿ ವಿದ್ಯಾರ್ಥಿಗಳು ಆರೋಗ್ಯ ತಪಾಸಣೆಯ ಪ್ರಯೋಜನವನ್ನು ಪಡೆದುಕೊಂಡರು.