ಕೋಟ, ಅ.27: ಯಕ್ಷಗಾನ ಕಲಿಕೆಗೆ ಗುರು ಅತೀ ಮುಖ್ಯ. ಇಂತಹ ಗುರುತ್ವವನ್ನು ಯಕ್ಷಗಾನ ಕಲಾಕೇಂದ್ರಗಳು ನೀಡುತ್ತದೆ. ಹಾಗೂ ಹಂಗಾರಕಟ್ಟೆ ಕಲಾಕೇಂದ್ರವು ಶ್ರೇಷ್ಠ ಯಕ್ಷಗುರುಕುಲ ಎನ್ನುವುದಕ್ಕೆ ಇಲ್ಲಿಂದ ತಯಾರಾದ ನೂರಾರು ಯಶಸ್ವೀ ಶಿಷ್ಯವೃಂದವೇ ಸಾಕ್ಷಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ಹೇಳಿದರು. ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಆಶ್ರಯದಲ್ಲಿ, ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಜರುಗಿದ ಯಕ್ಷಗಾನ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯಕ್ಷಗಾನ ಕಲೆಗೆ ತನ್ನದೆ ಆದ ವಿಶಿಷ್ಟ ಕಲಾಚೌಕಟ್ಟು ಇದೆ. ಕಲಾವಿದರು ಈ ಚೌಕಟ್ಟನ್ನು ಮೀರಬಾರದು. ಅದೇ ರೀತಿ ಪ್ರೇಕ್ಷಕರು ಸಹ್ಯವಾದವನ್ನು ಮಾತ್ರ ಸ್ವೀಕರಿಸಬೇಕು ಎಂದರು.
ಬಸ್ರೂರು ಮಹಾಲಿಂಗೇಶ್ವರ ದೇಗುಲದ ಆಡಳಿತ ಮೊಕ್ತೆಸರ ಬಿ.ಅಪ್ಪಣ್ಣ ಹೆಗ್ಡೆ ಮಾತನಾಡಿ, ಯಕ್ಷಗಾನ ಕ್ಷೇತ್ರಕ್ಕೆ ಹಂಗಾರಕಟ್ಟೆ ಕಲಾಕೇಂದ್ರದ ಕೊಡುಗೆ ಅತ್ಯಂತ ದೊಡ್ಡದು. ಸಂಸ್ಥೆಯ ಉಳಿವಿಗೆ ಎಲ್ಲರೂ ಸಹಕರಿಸಬೇಕು ಎಂದರು. ಕಲಾಕೇಂದ್ರದ ಅಧ್ಯಕ್ಷ ಆನಂದ್ ಸಿ. ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಲಿಗ್ರಾಮ ಗುರುನರಸಿಂಹ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ, ಆನೆಗುಡ್ಡೆ ದೇಗುಲದ ಆಡಳಿತ ಮೊಕ್ತಸರ ಶ್ರೀ ರಮಣ ಉಪಾಧ್ಯ, ಸಾಲಿಗ್ರಾಮ ದೇಗುಲದ ಮಾಜಿ ಅಧ್ಯಕ್ಷ ಡಾ.ಎ.ಪಿ.ಐತಾಳ ಇದ್ದರು. ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ಕ.ಸಾ.ಪ ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ್ ನಿರೂಪಿಸಿದರು.