ಕೋಟ, ಅ.27: ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಉಡುಪಿ ಜಿಲ್ಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸಾಲಿಗ್ರಾಮ, ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ ಶಿರೂರು ಮುದ್ದುಮನೆ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರ ಸಹಯೋಗದಲ್ಲಿ ಸಾಲಿಗ್ರಾಮದ ಪಾರಂಪಳ್ಳಿ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ನಡೆಯಿತು. ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ತಿಮ್ಮ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಸಾಲಿಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಘವೇಂದ್ರ ರಾವ್ ಕಣ್ಣಿನ ಪೊರೆ ಬಗ್ಗೆ ಮಾಹಿತಿ ನೀಡಿದರು. ಮುದ್ದು ಮನೆ ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆಯ ಆಡಳಿತ ಅಧಿಕಾರಿ ಶಂಕರ ಶೆಟ್ಟಿ ತಮ್ಮ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ನೇತ್ರ ತಜ್ಞರಾದ ಡಾ.ಮನೋಜ್ ಭಟ್ ಶಿಬಿರಾರ್ಥಿಗಳ ಕಣ್ಣಿನ ತಪಾಸಣೆ ನಡೆಸಿದರು.
ಶಿಬಿರದಲ್ಲಿ 143 ಮಂದಿ ಕಣ್ಣಿನ ತಪಾಸಣೆ ನಡೆಸಿದ್ದು, 27 ಜನರು ಕಣ್ಣಿನ ಪೊರೆಯ ತೊಂದರೆಯಿಂದ ಬಳಲುತ್ತಿದ್ದು, 26 ಜನರು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು. 49 ಜನರಿಗೆ ದೃಷ್ಟಿದೋಷದ ತೊಂದರೆ ಇದ್ದು ಕನ್ನಡಕದ ಅವಶ್ಯಕತೆ ಸೇರಿದಂತೆ ನವೆಂಬರ್ ೧೨ ರಂದು ಮುದ್ದು ಮನೆ ಕಣ್ಣಿನ ಆಸ್ಪತ್ರೆಯಲ್ಲಿ ಆಯ್ಕೆ ಆಗಿರುವ 26 ಜನರಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದರು. ಕಾರ್ಯಕ್ರಮದಲ್ಲಿ ಕೋಟ ಸಮುದಾಯ ಆರೋಗ್ಯ ಕೇಂದ್ರದ ಎನ್.ಸಿ.ಡಿ ವಿಭಾಗದವರು ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆಯನ್ನು ನಡೆಸಿದರು. ಆಸ್ಪತ್ರೆ ಸಿಬ್ಬಂದಿಯವರು ಮತ್ತು ಆಶಾ ಕಾರ್ಯಕರ್ತೆಯರು ಶಿಬಿರದಲ್ಲಿ ಭಾಗವಹಿಸಿದ್ದರು.