Saturday, October 26, 2024
Saturday, October 26, 2024

ರೈತರುಗಳು ಕೃಷಿ ವಲಯಕ್ಕೆ ಸಂಬಂಧಿಸಿದ ಮಾಹಿತಿಯನ್ನು, ಪಡೆದು ಸಮರ್ಪಕವಾಗಿ ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ರೈತರುಗಳು ಕೃಷಿ ವಲಯಕ್ಕೆ ಸಂಬಂಧಿಸಿದ ಮಾಹಿತಿಯನ್ನು, ಪಡೆದು ಸಮರ್ಪಕವಾಗಿ ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

Date:

ಉಡುಪಿ, ಅ.26: ಕೃಷಿ ಕ್ಷೇತ್ರಕ್ಕೆ ಪ್ರಾಧ್ಯಾನ್ಯತೆ ನೀಡುವುದರೊಂದಿಗೆ, ಕೃಷಿ ವಲಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಮರ್ಪಕವಾಗಿ ರೈತರುಗಳಿಗೆ ತಲುಪಿಸಿ, ಅವರುಗಳ ಜೀವನಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸುವ ದೃಷ್ಠಿಯಿಂದ ಕೃಷಿ ಮೇಳವನ್ನು ಆಯೋಜಿಸಲಾಗಿದ್ದು, ರೈತರುಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಮಾಹಿತಿಗಳನ್ನು ಪಡೆದು ತಮ್ಮ ಕೃಷಿ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

ಅವರು ಇಂದು (ಅ.26) ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಬ್ರಹ್ಮಾವರ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಮತ್ತು ಅರಣ್ಯ ಇಲಾಖೆ ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಕೃಷಿಕ ಸಮಾಜ ಉಡುಪಿ ಮತ್ತು ದಕ್ಷಿಣ ಕನ್ನಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಉಡುಪಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ ಜಿಲ್ಲಾ ಪಂಚಾಯತ್ ಉಡುಪಿ, ಬ್ಯಾಂಕ್ ಆಫ್ ಬರೋಡಾ (ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ) ಉಡುಪಿ, ಕೆನರಾಬ್ಯಾಂಕ್ ವಾರಂಬಳ್ಳಿ ಬ್ರಹ್ಮಾವರ ಹಾಗೂ ಜನತಾ ಫಿಶ್ ಮೀಲ್ & ಆಯಿಲ್ ಪ್ರೋಡಕ್ಟ್ಸ್ ಕೋಟ ಮಣೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕೃಷಿ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕೃಷಿ ಕ್ಷೇತ್ರವು ಜೀವನೋಪಾಯಕ್ಕೆ ಅವಕಾಶ ಮಾಡಿಕೊಟ್ಟಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಸಂಕ್ರಮಣ ಸ್ಥಿತಿಯಲ್ಲಿದ್ದು, ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಕೃಷಿಕರ ಸಮಸ್ಯೆಗಳು ಹಲವಾರು. ಪ್ರಕೃತಿಯ ವರದಾನದ ಜೊತೆಗೆ ರೈತರು ಕೃಷಿಯನ್ನು ಮಾಡಬೇಕಾದ ಅನಿವಾರ್ಯತೆ ಇದೆ. ಹವಾಮಾನದ ವೈಪರಿತ್ಯಗಳನ್ನು ಎದುರಿಸಿ ಮುಂದೆ ಸಾಗಿದಾಗ, ರೈತರು ಬೆಳೆದ ಬೆಲೆಗೆ ಮಾರುಕಟ್ಟೆಯಲ್ಲಿ ಸರಿಯಾದ ನ್ಯಾಯ ಸಿಗುವುದಿಲ್ಲ. ಮಾರುಕಟ್ಟೆ ಎಲ್ಲವನ್ನು ನಿರ್ಧಾರ ಮಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಸಹಕಾರ ನೀಡುವುದರೊಂದಿಗೆ, ಅವರುಗಳು ಬೆಳೆ ಬೆಳೆಯಲು ಹಿಂಜರಿಯಬಾರದು ಎಂಬ ಉದ್ದೇಶದೊಂದಿಗೆ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರ ಪ್ರಯೋಜವನ್ನು ಪ್ರತಿಯೊಬ್ಬ ರೈತರು ಪಡೆಯಬೇಕು ಎಂದರು.

ಕಾರ್ಮಿಕರ ಸಮಸ್ಯೆ ನೀಗಿಸಲು ಕೃಷಿ ವಿಜ್ಞಾನಿಗಳು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಉಳುಮೆ ಮಾಡಲು, ಭತ್ತವನ್ನು ನಾಟಿ ಮಾಡಲು, ಡ್ರೋನ್ ಮೂಲಕ ಔಷಧಿ ಸಿಂಪಡಣೆ ಸೇರಿದಂತೆ ಅನೇಕ ತಾಂತ್ರಿಕತೆಗಳಿದ್ದು, ಇದು ಎಲ್ಲಾ ವರ್ಗದ ರೈತರಿಗೆ ತಲುಪುವಂತಾಗಬೇಕು ಎಂದ ಅವರು, ವೈಜ್ಞಾನಿಕ ಕೃಷಿ ಮಾಡಲು ರೈತರುಗಳಿಗೆ ಸಾಕಷ್ಟು ಮಾಹಿತಿ ನೀಡಬೇಕು. ಕೃಷಿಯ ಜೊತೆಗೆ ಸಮಗ್ರ ಕೃಷಿಯನ್ನು ಬೆಳೆಸುವುದರ ಜೊತೆಗೆ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಬೇಕು ಎಂದರು.
ಕೆ.ಶಿ.ನಾ.ಕೃ.ತೋ.ವಿ.ವಿ ಶಿಕ್ಷಣ ನಿರ್ದೇಶಕ ಡಾ. ಬಿ ಹೇಮ್ಲಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಕರಾವಳಿ ಪ್ರದೇಶದ ಬೆಳೆಗಳಿಗೋಸ್ಕರ ಸಂಶೋಧನೆ ನಡೆಸಿ, ಕರಾವಳಿ ರೈತರ ಸಮಸ್ಯೆಗೆ ಸ್ಪಂದಿಸುವ ಅನೇಕ ತಾಂತ್ರಿಕತೆಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಸತತವಾಗಿ 41 ವರ್ಷಗಳಿಂದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ಮಾಡುತ್ತಾ ಬರಲಾಗುತ್ತಿದೆ ಎಂದರು.

ಯಾಂತ್ರೀಕರಣ ಮತ್ತು ಅನೇಕ ತಾಂತ್ರೀಕರಣ ಸಂಶೋಧನೆ ಜೊತೆಗೆ ಮಣ್ಣಿನ ಪ್ರಾಮುಖ್ಯತೆ ಅತೀ ಮುಖ್ಯವಾಗಿದ್ದು, ಈ ಸಂಸ್ಥೆಯಲ್ಲಿ ಸುಮಾರು ಸಾವಿರಾರು ರೈತರ ಹೊಲಗಳಿಂದ ಮಣ್ಣು ಮತ್ತು ನೀರನ್ನು ಸಂಗ್ರಹಣೆ ಮಾಡಿ ಪರಿಶೀಲಿಸಿ, ಹೆಲ್ತ್ ಕಾರ್ಡ್ ಅನ್ನು ನೀಡಲಾಗಿದೆ. ನರ್ಸರಿಯಿಂದ ಉತ್ತಮ ಗುಣಮಟ್ಟದ ಸಸಿಗಳನ್ನು ಉತ್ಪಾದನೆ ಮಾಡಿ ನೀಡಲಾಗುತ್ತಿದೆ. ತೋಟಗಾರಿಕೆ ಬೆಳೆಗಳನ್ನು ಬೆಳೆಸಲು ಉತ್ತೇಜನ ನೀಡಲಾಗುತ್ತಿದೆ. ರೈತರಿಗೆ ಹವಾಮಾನ ಕುರಿತು ಮುನ್ಸೂಚನೆ ನೀಡುವ ಕುರಿತು ಕೃಷಿ ಹವಾಮಾನ ಯೋಜನೆಯನ್ನು ಮಾಡಲಾಗುತ್ತಿದೆ ಎಂದರು. ಸಂಶೋಧನಾ ಕೇಂದ್ರದಲ್ಲಿ ಬಂದ ತಾಂತ್ರಿಕತೆಯನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಶಿರ್ಲಾಲು, ಮಂದಾರ್ತಿ, ಕಳ್ತೂರು-ಸಂತೆಕಟ್ಟೆ ಗ್ರಾಮಗಳನ್ನು ದತ್ತು ಗ್ರಾಮಗಳಾಗಿ ಪಡೆದು, ಎಲ್ಲಾ ತಾಂತ್ರಿಕತೆಗಳನ್ನು ಪ್ರಯೋಗ ಮಾಡುವುದರೊಂದಿಗೆ, ಮಾದರಿ ಗ್ರಾಮವನ್ನಾಗಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಗೌರವಾನ್ವಿತ ಕುಲಪತಿ ಡಾ. ಆರ್.ಸಿ ಜಗದೀಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಟ ಮಣೂರು ಜನತಾ ಫಿಶ್ ಮೀಲ್ & ಆಯಿಲ್ ಪ್ರೋಡಕ್ಟ್ಸ್ ವ್ಯವಸ್ಥಾಪಕ ನಿರ್ದೇಶಕ ಆನಂದ ಸಿ ಕುಂದರ್ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಮಂಗಳೂರು ವಲಯ ಬ್ಯಾಂಕ್ ಆಫ್ ಬರೋಡಾ ವಲಯ ಮುಖ್ಯಸ್ಥ ಮತ್ತು ಪ್ರಧಾನ ವ್ಯವಸ್ಥಾಪಕ ರಾಜೇಶ್ ಖನ್ನಾ, ಉಡುಪಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕಿ ಪ್ರತಿಭಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ವಿಸ್ತರಣಾ ನಿರ್ದೇಶಕ ಡಾ.ಕೆ.ಟಿ ಗುರುಮೂರ್ತಿ, ಬೆಂಗಳೂರು ಕೃಷಿ ತಂತ್ರಜ್ಞಾನ ಅಳವಡಿಕಾ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ಡಿ.ವಿ ಶ್ರೀನಿವಾಸ ರೆಡ್ಡಿ, ಉಡುಪಿಯ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ ಕುಮಾರ್ ಕೊಡ್ಗಿ, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ., ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಅಂಜನಾದೇವಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ
ಭುವನೇಶ್ವರಿ, ಪಶು ಸಂಗೋಪನೆ ಇಲಾಖೆಯ ಸಂದೀಪ್, ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಡಿ.ಎನ್., ಶಿವಮೊಗ್ಗ ಕೃಷಿ ಕಾಲೇಜಿನ ಡಾ. ತಿಪ್ಪೇಶ್, ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ನಾಯ್ಕ್, ಕೆ.ವಿ.ಕೆ ದಕ್ಷಿಣ ಕನ್ನಡ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಟಿ.ಜೆ ರಮೇಶ್, ಬ್ರಹ್ಮಾವರ ಡಿಪ್ಲೋಮಾ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಲಕ್ಷ್ಮಣ್, ವಿದ್ಯಾರ್ಥಿಗಳು, ಸಾರ್ವಜನಿಕರು, ರೈತರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಧನಂಜಯ ಬಿ ಸ್ವಾಗತಿಸಿ, ನೀಲಾವರ ಸಂತೋಷ್ ಶೆಟ್ಟಿ ನಿರೂಪಿಸಿ, ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಶಂಕರ್ ಎಂ ವಂದಿಸಿದರು.

ಏನೇನಿದೆ? ಕೃಷಿ ಮೇಳದಲ್ಲಿ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಿಂದ ಬಿಡುಗಡೆ ಮಾಡಿರುವಂತಹ ಕೃಷಿ ಯಂತ್ರೋಪಕರಣಗಳಾದ ಸುಧಾರಿತ ಕೊನೋ ವೀಡರ್, ಭತ್ತದಲ್ಲಿ ಕಳೆ ತೆಗೆಯುವ ಯಂತ್ರ, ಪವರ್ ಟಿಲ್ಲರ್ ಚಾಲಿತ ಮಣ್ಣು ದಬ್ಬುವ ಯಂತ್ರ ಹಾಗೂ ಕಾಡು ಪ್ರಾಣಿಗಳ ಹಾವಳಿ ಕುರಿತು ಮಾಲೀಕರನ್ನು ಎಚ್ಚರಿಸುವ ಸ್ವಯಂ ಚಾಲಿತ ವ್ಯವಸ್ಥೆ ಮುಂತಾದ ಕೃಷಿ ಯಂತ್ರೋಪಕರಣಗಳು, ಕೃಷಿಯಲ್ಲಿ ಡ್ರೋನ್ ಬಳಕೆಯ ಪ್ರಾತ್ಯಕ್ಷಿಕೆ, ಸಿಓ-4, 5 ಮತ್ತು ಸಿಓಎಫ್‌ಎಸ್-29, 31 ಹಾಗೂ ಸೂಪರ್ ನೇಪಿಯರ್ ಬೆಳೆಗಳ ಪ್ರಾತ್ಯಕ್ಷಿಕೆ, ತೆಂಗಿನಲ್ಲಿ ಬಹುಬೆಳೆ ಯೋಜನೆ, ಪೋಷಕಾಂಶಗಳ ನಿರ್ವಹಣೆ, ತೊಟಗಾರಿಕೆ ಬೆಳೆಗಳಲ್ಲಿ ಕಸಿಕಟ್ಟುವಿಕೆ, ಸಾವಯವ ಗೊಬ್ಬರ, ಕಾಂಪೋಸ್ಟ್, ಎರೆಗೊಬ್ಬರ, ಅಜೋಲ್ಲಾ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆ, ಹೈನುಗಾರಿಕೆ, ಮೀನುಗಾರಿಕೆ, ಆಡು, ಕೋಳಿ ಮತ್ತು ಬಾತುಕೋಳಿ ಸಾಕಾಣಿಕೆಗಳ ಪ್ರಾತ್ಯಕ್ಷಿಕೆ, ಮೌಲ್ಯಾದಾರಿತ ಆಹಾರ ಉತ್ಪನ್ನಗಳು ಮತ್ತು ಪ್ರಾತ್ಯಕ್ಷಿಕೆ, ಜೈವಿಕ ಅನಿಲ ಉತ್ಪಾದನಾ ಘಟಕಗಳು, ಅಲಂಕಾರಿಕ ಮತ್ತು ಹೂವಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ, ಕೃಷಿ ವಸ್ತು ಪ್ರದರ್ಶನ, ಪಶುಪಾಲನಾ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಯ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವ ಮಳಿಗೆಗಳು ಸೇರಿದಂತೆ ಸುಮಾರು 225 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇಂದಿನ (ಅ.26) ಚಿನ್ನದ ದರ

GOLD 22KT- 7,360 8 GRAMS- 58,880

ಕೆ.ಎಂ.ಸಿ. ಮಣಿಪಾಲ: ಜಾಗೃತಿ ನಡಿಗೆ

ಮಣಿಪಾಲ, ಅ.26: ಪ್ರತಿವರ್ಷ ಅಕ್ಟೋಬರ್‌ನ ಎರಡನೇ ಶನಿವಾರದಂದು, ಉಪಶಾಮಕ ಆರೈಕೆ ಅಗತ್ಯಗಳೊಂದಿಗೆ...

ಹಂಗಾರಕಟ್ಟೆ ಕಲಾಕೇಂದ್ರ ವಿದ್ಯಾರ್ಥಿಗಳ ಸಮಾವೇಶ

ಕೋಟ, ಅ.26: ಐವತ್ತು ವರ್ಷದ ಇತಿಹಾಸವಿರುವ ಗುಂಡ್ಮಿಯ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ,...

ಸ್ನಾತಕೋತ್ತರ ಪದವಿಯ ಸಂಶೋಧನಾ ಮಾರ್ಗದರ್ಶಿಗಳ ಕ್ಷಮತೆ ವೃದ್ಧಿ ರಾಷ್ಟ್ರೀಯ ಕಾರ‍್ಯಗಾರ

ಮೂಡುಬಿದಿರೆ, ಅ.26: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಭಾರತೀಯ ಔಷಧ...
error: Content is protected !!