ಉಡುಪಿ, ಅ.17: ಮಹರ್ಷಿ ವಾಲ್ಮೀಕಿ ಸಂಘಟನೆ ಉಡುಪಿ ಜಿಲ್ಲೆಯ ವತಿಯಿಂದ ಜಯಂತ್ಯೋತ್ಸವ ಕಾರ್ಯಕ್ರಮ ಉಡುಪಿಯ ಮಥುರಾ ಕಂಫರ್ಟ್ಸ್ ನಲ್ಲಿ ನಡೆಯಿತು. ಉದ್ಯಮಿ ವಿಶ್ವನಾಥ ಶೆಣೈ ವಾಲ್ಮೀಕಿ ಮಹರ್ಷಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಕಲಾರಾಧಕ, ಕಲಾವಿದ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಇವರನ್ನು ಗೌರವಿಸಿ ಅಭಿನಂದಿಸಲಾಯಿತು.
ಭಾರತ್ ಸ್ಕೌಟ್ಸ್ ಜಿಲ್ಲಾ ಆಯುಕ್ತ ಜನಾರ್ದನ್ ಕೊಡವೂರು ಮಾತನಾಡಿ, ಸಂಘಟನೆಯಲ್ಲಿ ಬಲವಿದೆ. ಒಟ್ಟಾಗಿ ಸೇರಿ ಕೆಲಸ ಮಾಡಿದಾಗ ಸರಕಾರದ ಮಟ್ಟಕ್ಕೂ ನಮ್ಮ ಬೇಡಿಕೆಯನ್ನು ತಲುಪಿಸಲು ಸಾಧ್ಯ ಎಂದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಹೆಚ್. ಪಿ ಮಾತನಾಡಿ, ಜಯಂತ್ಯೋತ್ಸವವನ್ನು ಆಚರಿಸುವ ಮೂಲಕ ಶ್ರೇಷ್ಠ ದಾರ್ಶನಿಕ ವಾಲ್ಮೀಕಿ ಮಹರ್ಷಿಯನ್ನು ನೆನಪಿಸುವ ಮಹತ್ ಕಾರ್ಯವನ್ನು ಮಾಡಿರುವುದು ಶ್ಲಾಘನೀಯ ಎಂದರು. ಮಹರ್ಷಿ ವಾಲ್ಮೀಕಿ ಸಂಘಟನೆಯ ಗೌರವಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಉಪನ್ಯಾಸ ನೀಡಿದರು.
ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ರಂಜನಿ ವಸಂತ್, ನಗರಸಭಾ ಸದಸ್ಯೆ ಅಮೃತ ಕೃಷ್ಣಮೂರ್ತಿ, ಶಾಂತಪ್ಪ ದೊರೆ, ಆನಂದ ವಾಲ್ಮೀಕಿ, ಗೋಪಾಲ ದೇವದುರ್ಗ, ಶಿವರಾಜ್ ವಾಲಿಕಾರ್, ಕನಕ, ದೇವು ದೊರೆ, ಗೋಪಾಲ ದೊರೆ, ಸಂಗನಗೌಡ ಸಾತಿಹಾಳ ಉಪಸ್ಥಿತರಿದ್ದರು. ಉಡುಪಿ ತಾಲ್ಲೂಕು ಕಸಾಪ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.