ಕೋಟ, ಆ.20: ಗ್ರಾಮೀಣ ಪ್ರದೇಶದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನಾಗರಿಕ ಸೇವೆ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಸಂಬಂಧಿಸಿದಂತೆ ಲಕ್ಷ್ಮೀ ಸೋಮ ಬಂಗೇ ರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆ ಮತ್ತು ನರೇನ್ ಅಕಾಡೆಮಿ ಬ್ರಹ್ಮಾವರ ಇವರ ಸಹಭಾಗಿತ್ವದಲ್ಲಿ 30 ಗಂಟೆಗಳ ತರಬೇತಿ ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ ಕುಂದರ್ ಉದ್ಘಾಟಿಸಿದರು.
ತರಬೇತಿಯ ಪ್ರಯೋಜನ ಪಡೆದು ಉನ್ನತ ಸರಕಾರಿ ಹುದ್ದೆಗಳಿಗೆ ಆಯ್ಕೆಯಾಗುವಂತೆ ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಕಾಂತ್, ವಿದ್ಯಾರ್ಥಿಗಳಿಗೆ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಅಗತ್ಯವಿರುವ ಕೌಶಲ್ಯಗಳನ್ನು ಹೇಗೆ ಬೆಳೆಸಿಕೊಳ್ಳಬೇಕೆಂದು ಮಾರ್ಗದರ್ಶನ ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುನೀತ ವಿ., ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನಾಗರಿಕ ಸೇವೆ ಹಾಗೂ ಸ್ಪರ್ಧಾತ್ಮಕ ಸೇವೆಗಳಿಗೆ ಸೇರ್ಪಡೆಗೊಳ್ಳುವಂತೆ ಕರೆ ನೀಡಿದರು. ಸಂಘಟಕರಾದ ಡಾ. ಸುಬ್ರಹ್ಮಣ್ಯ ಎ., ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ರಾಜಣ್ಣ ಎಂ ನಿರೂಪಿಸಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ರಮೇಶ ಆಚಾರ್ ವಂದಿಸಿದರು.