ನವದೆಹಲಿ, ಆ.7: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿರುವ ವಿಚಾರದಲ್ಲಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ) ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್‌ಗೆ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ ಎಂದು ಕೇಂದ್ರ ಕ್ರೀಡಾ ಸಚಿವ ಡಾ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, ಮಹಿಳಾ ಕುಸ್ತಿಪಟುಗಳಿಗೆ ಕೇಂದ್ರವು ಎಲ್ಲಾ ರೀತಿಯ ಸಹಾಯವನ್ನು ನೀಡುತ್ತಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದಾಗಿ ಐಒಎ ಅಧ್ಯಕ್ಷ ಪಿ.ಟಿ. ಉಷಾ ಅವರಿಗೆ ಕರೆ ಮಾಡಿ ಪ್ರತಿಭಟಿಸಲು ಹೇಳಿದ್ದಾರೆ. ಫೋಗಟ್ 50 ಕೆಜಿ ವಿಭಾಗದಲ್ಲಿ ಆಡುತ್ತಿದ್ದು, ಆಕೆಯ ತೂಕ ನಿಗದಿತ ಮಾನದಂಡಕ್ಕಿಂತ 100 ಗ್ರಾಂ ಹೆಚ್ಚು ಕಂಡುಬಂದಿದೆ ಎಂಬ ಕಾರಣ ನೀಡಿ ಅವರನ್ನು ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿದೆ.
ದೇಶಾದ್ಯಂತ ಕ್ರೀಡಾಭಿಮಾನಿಗಳು ವಿನೇಶ್ ಫೋಗಟ್ ಅನರ್ಹತೆಗೆ ಸಂಬಂಧಿಸಿದಂತೆ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಭಾರತೀಯ ಕ್ರೀಡಾಪಟುಗಳ ಮನೋಸ್ಥೈರ್ಯವನ್ನು ಕುಗ್ಗಿಸಲು ಷಡ್ಯಂತ್ರ ನಡೆದಿದೆ ಎಂಬ ಕೂಗು ಕೇಳಿಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳ ಗಣ್ಯರು ವಿನೇಶ್ ಫೋಗಟ್ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ನಡೆಸಿದ ಸಾಧನೆಯನ್ನು ಶ್ಲಾಘಿಸಿದ್ದಾರೆ.