ಉಡುಪಿ, ಜು. 16: ಉಡುಪಿಯ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಒಂದಾದ ಗಾಂಧಿ ಆಸ್ಪತ್ರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ವಿನೂತನ ಕಾರ್ಯಕ್ರಮ “ಮನೆಯೇ ಗ್ರಂಥಾಲಯ” ಇದರ 50ರ ಸಂಭ್ರಮ ಸುವರ್ಣ ಸಂಭ್ರಮವನ್ನು ಆಚರಿಸಲಾಯಿತು.
ಪ್ರೊ. ಮುರಳೀಧರ ಉಪಾಧ್ಯ ಅವರು ಪುಸ್ತಕಗಳನ್ನು ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಹರೀಶ್ಚಂದ್ರ ಅವರಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರಿಗೆ ಸಂಬಂಧಪಟ್ಟ ವಿವಿಧ ಪುಸ್ತಕಗಳು ಈ ಗ್ರಂಥಾಲಯದಲ್ಲಿ ಇರಲಿ. ಇನ್ನಷ್ಟು ವ್ಯವಸ್ಥಿತ ಹಾಗೂ ವಿಶಿಷ್ಟ ರೀತಿಯಲ್ಲಿ ಮನೆಯೇ ಗ್ರಂಥಾಲಯ ಕಾರ್ಯಕ್ರಮವನ್ನು ಆಯೋಜನೆ ಮಾಡಿ. ಆಸ್ಪತ್ರೆಗೆ ಬರುವ ಎಲ್ಲರ ಮನಸ್ಥಿತಿಗೆ ಅನುಗುಣವಾಗಿ ಪುಸ್ತಕಗಳು ಇಲ್ಲಿ ಲಭ್ಯವಾಗಲಿ. ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ಪುಸ್ತಕಗಳು ಡಾ. ಪಿ ವಿ ಭಂಡಾರಿ, ಡಾ. ವಿರೂಪಾಕ್ಷ ದೇವರಮನೆಇನ್ನಿತರರು ಬರೆದ ಪುಸ್ತಕಗಳು ಇಲ್ಲಿ ಲಭ್ಯವಾಗಲಿ. ಒಳ್ಳೆಯ ಆರೋಗ್ಯಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಓದುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು. ಮೊಮ್ಮಗಳು ಬರೆದ ಮೊಬೈಲ್ ಮೈಥಿಲಿ ಪುಸ್ತಕವನ್ನು ನೀಡಿದರು.
ಡಾ. ಹರೀಶ್ಚಂದ್ರ ಅವರನ್ನು ಗೌರವಿಸಲಾಯಿತು. ಡಾ. ರಾಜಲಕ್ಷ್ಮೀ, ಡಾ. ಆಮ್ನಾ ಹೆಗ್ಡೆ, ಡಾ. ವ್ಯಾಸರಾಜ ತಂತ್ರಿ ಮಾತನಾಡಿದರು. ಹಿರಿಯರಾದ ಪ್ರೊ ಶಂಕರ್, ನಾರಾಯಣ ಮಡಿ ,ಸಂಧ್ಯಾ ಶೆಣೈ ಭವಾನಿ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.