ನವದೆಹಲಿ, ಮಾ. 22: ರಾಷ್ಟ್ರ ರಾಜಧಾನಿಯ ಹಲವೆಡೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಕ್ಷೇಪಾರ್ಹ ಬರಹಗಳಿದ್ದ ಪೋಸ್ಟರ್ ಗಳನ್ನು ಅಳವಡಿಸಿದ ಆರೋಪದ ಮೇರೆಗೆ 6 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದು, 100 ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ದೀಪೇಂದ್ರ ಪಾಠಕ್ ಹೇಳಿದ್ದಾರೆ.
“ಮೋದಿ ಹಠಾವೋ ದೇಶ್ ಬಚಾವೋ” ಎಂಬ ಪೋಸ್ಟರ್ ಗಳನ್ನು ಅಳವಡಿಸಲಾಗಿದೆ ಎಂಬ ಆರೋಪದ ಮೇರೆಗೆ ಪೊಲೀಸರು ಕಾರ್ಯಾಚರಣೆಗೆ ಇಳಿದರು. ಈ ಪೋಸ್ಟರ್ ಗಳಲ್ಲಿ ಯಾವುದೇ ಮುದ್ರಣ ಸಂಸ್ಥೆಯ ಹೆಸರು ಉಲ್ಲೇಖ ಮಾಡಲಿಲ್ಲ ಮತ್ತು ಯಾವುದೇ ಪಕ್ಷದ, ಸಂಘಟನೆಯ ಹೆಸರು ಕೂಡ ಇಲ್ಲ.
ಘಟನೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಕಛೇರಿಯಿಂದ ತೆರಳಿದ ಒಂದು ವ್ಯಾನ್ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು ವಾಹನದಲ್ಲಿದ್ದ ಪೋಸ್ಟರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ.