ಮಂಗಳೂರು, ಫೆ. 17: ರಾಜ್ಯ ಬಜೆಟ್ ನಲ್ಲಿ ಮೀನುಗಾರಿಕಾ ವಲಯ ಹಾಗೂ ಪ್ರವಾಸೋದ್ಯಮ ವಲಯ ಸೇರಿದಂತೆ ಕರಾವಳಿಯ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯ ಘೋಷಣೆ ಮಾಡಲಾಗಿದ್ದು, ಅಭಿವೃದ್ಧಿ ನಿಟ್ಟಿನಲ್ಲಿ ಇದು ಅತ್ಯುತ್ತಮ ಬಜೆಟ್ ಆಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮೆಚ್ಚುಗೆ ಸೂಚಿಸಿದ್ದಾರೆ.
ಮೀನುಗಾರಿಕೆ ವಲಯಕ್ಕೆ ಸಂಬಂಧಿಸಿದಂತೆ 1.50 ಲಕ್ಷ ಕಿಲೋ ಲೀಟರ್ ಡೀಸೆಲ್ ಸಬ್ಸಿಡಿಯನ್ನು 2 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಮೀನುಗಾರಿಕೆ ಉತ್ತಮ ಯೋಜನೆಯನ್ನು ಪ್ರಕಟಿಸಲಾಗಿದೆ. ಸೀಮೆಎಣ್ಣೆ ಎಂಜಿನ್ ಹೊಂದಿರುವ ಬೋಟ್ ಗಳಿಗೆ ಡೀಸೆಲ್ ಅಥವಾ ಪೆಟ್ರೋಲ್ ಎಂಜಿನ್ ಅಳವಡಿಕೆಗೆ 50,000 ಪ್ರೋತ್ಸಾಹ ಧನ ನೀಡುವ ಮೂಲಕ ಬಡ ಮೀನುಗಾರರ ಹಿತ ಕಾಪಾಡುವ ಕೆಲಸವನ್ನು ಮಾಡಲಾಗಿದೆ.
ವಸತಿ ರಹಿತ ಮೀನುಗಾರರಿಗೆ 5 ಸಾವಿರದ ಬದಲು 10 ಸಾವಿರ ಮನೆಗಳನ್ನು ನಿರ್ಮಾಣ ಮಾಡಲು ಯೋಜನೆ ವಿಸ್ತರಣೆ ಉತ್ತಮ ಯೋಜನೆಯಾಗಿದೆ. ಬಂದರುಗಳ ಅಭಿವೃದ್ಧಿ, ಗುರುಪುರ- ನೇತ್ರಾವತಿ ನದಿಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ ಸೇರಿದಂತೆ ಹಲವು ಯೋಜನೆಗಳನ್ನು ಕರಾವಳಿಗೆ ನೀಡಲಾಗಿದ್ದು, ಅಭಿವೃದ್ಧಿಗೆ ಪೂರಕ ಬಜೆಟ್ ಆಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.