ಉಡುಪಿ, ಫೆ. 17: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ 2023-24 ನೇ ಸಾಲಿನ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಯ ಅತ್ಯುತ್ತಮ ಬಜೆಟ್ ಆಗಿರುತ್ತದೆ ಎಂದು ಶಾಸಕ ಕೆ ರಘುಪತಿ ಭಟ್ ಶ್ಲಾಘಿಸಿದ್ದಾರೆ.
ಈ ಬಜೆಟ್ ನಲ್ಲಿ ಪ್ರಮುಖವಾಗಿ ರಾಜ್ಯದ ರೈತ ಸಮುದಾಯಕ್ಕೆ ವಿಶೇಷ ಕೊಡುಗೆಗಳನ್ನು ನೀಡಲಾಗಿದೆ. ಶೂನ್ಯ ಬಡ್ಡಿ ದರದ ಮೂಲಕ ಸಾಲ ಪ್ರಮಾಣವನ್ನು ರೂ. 5. 00 ಲಕ್ಷದವರೆಗೆ ಹೆಚ್ಚಿಸಲಾಗಿದ್ದು ಇದರಿಂದ 30 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಅಲ್ಲದೆ ಸ್ತ್ರೀ ಸಬಲೀಕರಣಕ್ಕಾಗಿ ಒಂದು ಲಕ್ಷ ಮಹಿಳೆಯರಿಗೆ ಕೌಶಲ್ಯ ತರಬೇತಿ ಸಹಾಯಧನ ಒದಗಿಸಿರುವುದು, ಮೀನುಗಾರಿಕಾ ದೋಣಿಗಳಿಗೆ ಎರಡು ಲಕ್ಷ ಕಿ. ಲೀಟರ್ ಡೀಸೆಲ್ ನೀಡಲು ನಿರ್ಧರಿಸಿ ಇದಕ್ಕೆ ರೂ. 250 ಕೋಟಿ ವಿನಿಯೋಗಿಸಲಾಗಿದೆ.
ಆಳ ಸಮುದ್ರ ಮೀನುಗಾರಿಕೆಯನ್ನು ಉತ್ತೇಜಸಲು ನೂರು ಆಳಸಮುದ್ರ ಮೀನುಗಾರಿಕಾ ದೋಣಿಗಳಿಗೆ ಮತ್ಸ್ಯ ಸಿರಿ ಯೋಜನೆ ಸಂಯೋಜನೆ ಮೂಲಕ ಮತ್ಸ್ಯೋದ್ಯಮಕ್ಕೆ ಆದ್ಯತೆ ನೀಡಲಾಗಿದೆ. ಹಾಗೂ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ತೋಟಗಾರಿಕೆ, ಉದ್ಯೋಗ ಸೃಜನೆ ಸೇರಿದಂತೆ ಎಲ್ಲರನ್ನೂ ಎಲ್ಲವನ್ನೂ ಒಳಗೊಂಡ ದೂರದೃಷ್ಟಿತದ ಯೋಜನೆಗಳನ್ನು ಅಳವಡಿಸಿರುವ ರಾಜ್ಯದ ಸಮಗ್ರ ಅಭಿವೃದ್ಧಿಯ ಬಜೆಟ್ ಆಗಿದೆ ಎಂದು ಬಣ್ಣಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆ ಸಂದರ್ಭ ಉತ್ತರ ನೀಡುವಾಗ ಅಥವಾ ಪೂರಕ ಬಜೆಟ್ ಮಂಡಿಸುವ ಸಂದರ್ಭ ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಮಂಡಳಿ ಘೋಷಣೆ ಮಾಡಿ ಅನುದಾನ ಮೀಸಲಿಡುವಂತೆ ಶಾಸಕ ರಘುಪತಿ ಭಟ್ ಅವರು ಆಗ್ರಹಿಸಿದ್ದಾರೆ.