ಲಂಡನ್, ಫೆ. 4: ಬ್ರಿಟನ್ ನ ಮೊಟ್ಟಮೊದಲ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ನೇತೃತ್ವದ ಸರ್ಕಾರ ಶತದಿನಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಕರ್ತವ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಬ್ರಿಟನ್ ಪ್ರಧಾನಿಯಾಗಿ ನನ್ನ ಕರ್ತವ್ಯವನ್ನ ಮಾಡುತ್ತಿದ್ದು, ಹಿಂದುತ್ವದಿಂದ ಪ್ರೇರಿತನಾಗಿದ್ದೇನೆ ಎಂದು ಹೇಳಿದ್ದಾರೆ.
ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವುದು ನನ್ನ ಧರ್ಮವಾಗಿತ್ತು. ನೂತನ ಜವಾಬ್ದಾರಿ ಹಲವಾರು ಸವಾಲುಗಳಿಂದ ಕೂಡಿದೆ. ನನ್ನ ಮೇಲೆ ಜನರು ಇಟ್ಟಿರುವ ನಿರೀಕ್ಷೆಗಳಿಗೆ ಚ್ಯುತಿ ಬಾರದಂತೆ ನಾನು ನಡೆದುಕೊಳ್ಳಬೇಕು. ಸರಿಯಾದ ಮಾರ್ಗದಲ್ಲಿ ಸರಿಯಾದ ರೀತಿಯಲ್ಲಿ ಯೋಜಿತ ಕಾರ್ಯಗಳನ್ನು ಮಾಡುವುದು ಧರ್ಮವಾಗಿದೆ. ಇದನ್ನು ನಂಬಿಕೊಂಡೇ ನಾನು ಬೆಳೆದಿದ್ದೇನೆ ಎಂದು ರಿಷಿ ಸುನಕ್ ಹೇಳಿದ್ದಾರೆ.
42 ವರ್ಷದ ಬ್ರಿಟನ್ ಪ್ರಧಾನಿ ಸುನಕ್ ಅವರು ಸಂಸತ್ ಸದಸ್ಯರಾಗಿ ಆಯ್ಕೆಯಾದ ನಂತರ ಹೌಸ್ ಆಫ್ ಕಾಮನ್ಸ್ನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಭಗವದ್ಗೀತೆಯನ್ನ ಉಲ್ಲೇಖಿಸಿದ್ದರು. ಹಿಂದುತ್ವದಲ್ಲಿನ ನಂಬಿಕೆಗಳೇ ತಮ್ಮ ಶಕ್ತಿ ಎಂದು ಬಣ್ಣಿಸಿದರು.