ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ತಿಂಗಳಿಗೊಮ್ಮೆ ಪೋಷಕರನ್ನು ಶಾಲೆಗೆ ಕಡ್ಡಾಯವಾಗಿ ಕರೆಸಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಒಟ್ಟಿಗೆ ಕೂತು ವಿದ್ಯಾರ್ಥಿಗಳ ಪ್ರಗತಿ ಕುರಿತಾಗಿ ಮಾತುಕತೆ ನಡೆಸುವುದು, ಇದನ್ನೇ ಈಗಿನ ಇಂಗ್ಲಿಷ್ ಪರಿಭಾಷೆಯಲ್ಲಿ ಕರೆಯುವುದು “ಓಪನ್ ಹೌಸ್” ಮೀಟಿಂಗ್. ಹಾಗಾದರೆ ನಾವು ನೀವು ಬಹು ಹಿಂದೆ ಶಾಲೆಯಲ್ಲಿ ಕಲಿಯುವಾಗ ಈ “ಓಪನ್ ಹೌಸ್ “ಸಿಸ್ಟಮ್ ಇರಲಿಲ್ಲವಾ? ಇತ್ತು. ಆದರೆ ನಮ್ಮ ಓಪನ್ ಹೌಸ್ ನಡೆಯುವ ಸ್ಥಳ ಮಾತ್ರ ಬೇರೆ ಆಗಿತ್ತು.
ವಾರಕ್ಕೊಮ್ಮೆ ನಮ್ಮ ನಿಮ್ಮ ಅಪ್ಪಯ್ಯ ಪೇಟೆಗೆ ಹೇೂಗುತ್ತಿದ್ರು ಅಲ್ಲಿ ಮಾರ್ಗ ಮಧ್ಯದಲ್ಲಿಯೇ ನಮ್ಮ ಮೇಷ್ಟ್ರು ಸಿಗುತ್ತಿದ್ದರು. ಮೇಷ್ಟ್ರು ಇದೇ ಸರಿಯಾದ ಸಂದರ್ಭ ಅಂದುಕೊಂಡು ನಮ್ಮ ಜಾತಕವನ್ನು ಬಿಡಿಸಿ ಹೇಳುತ್ತಿದ್ದರು. ಅಂದು ಅಪ್ಪಯ್ಯ ಮನೆಗೆ ಬಂದವರೇ ತಡ ಮಾಡದೆ ಮನೆ ಮಂದಿಯನ್ನೆಲ್ಲ ಕೂರಿಸಿಕೊಂಡು ಎಲ್ಲರಿಗೂ ಕೇಳುವ ಹಾಗೆ ನಮ್ಮ ಜಾತಕವನ್ನು ಬಿಡಿಸಿ ಬಿಡಿಸಿ “ಓಪನ್ ಹೌಸ್” ಮಾಡುತ್ತಿದ್ದರು. ಇದು ನಿಜವಾದ ನಮ್ಮೆಲ್ಲರ ಶೈಕ್ಷಣಿಕ ಬದುಕಿನ “ಓಪನ್ ಹೌಸ್” ರಸಾನುಭವ ನೇೂಡಿ. ಹಾಗಾಗಿ ಇದನ್ನೇ ಕರೆಯುವುದು “ಓಲ್ಡ್ ವೈನ್ ಇನ್ ನ್ಯೂ ಬಾಟಲ್” ಹೊಸ ಶಿಕ್ಷಣ ಪದ್ಧತಿ ಎಂದು ಕರೆಯುವುದು.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ