ಕೋಟ: ನವೆಂಬರ್ 26 ರಂದು ನಡೆಯುವ ಹೊಳಪು – 2022 ಪಂಚಾಯತ್ ರಾಜ್ ಕ್ರೀಡಾ ಕೂಟ ಅತ್ಯಂತ ಯಶಸ್ವಿಯಾಗಲಿ. ಜನಸಾಮಾನ್ಯರ ನಡುವೆ ಜನರ ನೋವು ನಲಿವುಗಳನ್ನು ಅರಿತು ಸೇವಾ ಮನೋಭಾವದಿಂದ ಕೆಲಸ ಮಾಡುವ ಪಂಚಾಯತ್ ಹಾಗೂ ನಗರ ಸ್ಥಳೀಯಾಡಳಿತ ಪ್ರತಿನಿಧಿಗಳು ಪಕ್ಷಭೇದ ಮರೆತು ಒಟ್ಟಾಗಿ ಒಂದಾಗಿ ಹೊಳಪು- 2022 ಕ್ರೀಡೋತ್ಸವದಲ್ಲಿ ಭಾಗವಹಿಸುವ ಮೂಲಕ ಅವಳಿ ಜಿಲ್ಲೆಗಳ ಒಗ್ಗಟ್ಟು ಪ್ರದರ್ಶನ ಆಗಲಿ ಎಂದು ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಹೊಳಪು ಕ್ರೀಡಾಕೂಟದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ ಅವರ ಆಶ್ರಯದಲ್ಲಿ ನಡೆಯುವ ಉಡುಪಿ ಮತ್ತು ದಕ್ಷಿಣ ಕನ್ನಡ ಸ್ಥಳೀಯ ಜನಪ್ರತಿನಿಧಿಗಳ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಹೊಳಪು-2022 (ಜನಾಧಿಕಾರದ ಸಂಚಲನ) ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಆನಂದ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಪಂಚಾಯತ್ ಸದಸ್ಯರುಗಳು, ಕಾರಂತ ಪ್ರತಿಷ್ಠಾನದ ಎಚ್ ಪ್ರಮೋದ್ ಹಂದೆ, ಸುಬ್ರಾಯ ಆಚಾರ್, ಹರೀಶ್ ಶೆಟ್ಟಿ, ವಿವೇಕ್ ಅಮೀನ್ ಉಪಸ್ಥಿತರಿದ್ದರು.