ಲಾಂಛನ ಉಡುಪಿ ಸಂಸ್ಥೆಯು ಕಳೆದ 10 ವರ್ಷಗಳಿಂದ ಭಾರತೀಯ ಸಂಸ್ಕೃತಿ, ಕಲೆ, ಜನಪದ ಮತ್ತು ಆಚಾರ-ವಿಚಾರಗಳನ್ನು ಉಳಿಸುವ ಮತ್ತು ಬೆಳೆಸುವ ಕಳಕಳಿಯಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ.
ಕಳೆದ 2 ವರ್ಷಗಳಿಂದ ಕಾರ್ತಿಕ ಮಾಸದಲ್ಲಿ “ಲಾಂಛನದ ಲಕ್ಷದೀಪ” ಎನ್ನುವ ಹೆಸರಿನಲ್ಲಿ ವಿವಿಧ ದಾನಿಗಳ ನೆರವಿನಿಂದ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳ ವಿವಿಧ ಪ್ರಾಚೀನ ಮತ್ತು ದೈವೀಕವಾಗಿರುವ 150 ಕ್ಕಿಂತಲೂ ಹೆಚ್ಚಿನ ದೇವಾಲಯಗಳಿಗೆ ತಲಾ 1008ರಂತೆ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಮಣ್ಣಿನ ಹಣತೆಗಳು, ತಲಾ 2000 ದಂತೆ ಬತ್ತಿಗಳು ಮತ್ತು ಎಳ್ಳೆಣ್ಣೆ ಇವಿಷ್ಟನ್ನು ಅರ್ಪಣೆ ಮಾಡಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ 2ಲಕ್ಷಕ್ಕಿಂತಲೂ ಹೆಚ್ಚಿನ ಮಣ್ಣಿನ ಹಣತೆಗಳು, 4 ಲಕ್ಷಕ್ಕಿಂತಲೂ ಹೆಚ್ಚಿನ ಬತ್ತಿಗಳು ದೇವಸಾನಿದ್ಯವನ್ನು ಸೇರಿವೆ.
ಈ ಕಾರ್ಯಕ್ರಮದ ಮೂಲ ಉದ್ದೇಶವೇನೆಂದರೆ, ಕೆಲವೊಂದು ದೇವಾಲಯಗಳಲ್ಲಿ ಯಾವುದೋ ಕಾಲಘಟ್ಟದಲ್ಲಿ ಹಣತೆ, ಎಣ್ಣೆ ಮತ್ತು ಬತ್ತಿಗಳ ಕೊರತೆಯಿಂದಲೇ ದೀಪೋತ್ಸವದಂತಹ ಆಚರಣೆಗಳು ನಿಂತುಹೋಗಿರುವ ಮತ್ತು ಅತೀ ಪ್ರಾಚೀನ ದೇವಾಲಯಗಳು ಆರ್ಥಿಕವಾಗಿ ತೀರಾ ಕಷ್ಟದ ಪರಿಸ್ಥಿತಿಯಲ್ಲಿ ಇರುವ ಉದಾಹರಣೆಗಳು ಸಾಕಷ್ಟು ಇರುವ ಈ ಸಂದರ್ಭದಲ್ಲಿ, ಭಾರತೀಯ ಸಂಸ್ಕೃತಿಯ ಶಕ್ತಿ ಕೇಂದ್ರಗಳಾದ ದೇವಾಲಯಗಳಲ್ಲಿ ಅನಾದಿಕಾಲದಿಂದಲೂ ನಡೆಯುತ್ತಾ ಬಂದಿರುವ ಆಚರಣೆಗಳು, ದೀಪೋತ್ಸವದಂತಹ ಕಾರ್ಯಕ್ರಮಗಳು ಮುಂದುವರೆಯಬೇಕು, ಆ ಮೂಲಕ ಆಯಾ ದೇವಾಲಯಗಳ ವ್ಯಾಪ್ತಿಗೆ ಬರುವ ಜನರ ಧಾರ್ಮಿಕ ಭಾವನೆ ಜಾಗೃತವಾಗಬೇಕು ಹಾಗೂ ತಲೆಮಾರುಗಳಿಂದ ಕುಲಕಸುಬನ್ನು ನಡೆಸುತ್ತಾ ಬಂದಿರುವ ಕುಶಲಕರ್ಮಿಗಳಿಗೆ ತಮ್ಮ ಕುಲಕಸುಬನ್ನು ಮುಂದುವರೆಸಲು ಸೂಕ್ತ ಉತ್ತೇಜನ ಮತ್ತು ಪ್ರೋತ್ಸಾಹ ಕೂಡ ಸಿಗಬೇಕು ಆ ಮೂಲಕ ದೇಸೀ ಸೊಗಡು ಈ ಭಾರತದ ಮಣ್ಣಿನಲ್ಲಿ ಜೀವಂತವಾಗಿರಬೇಕು ಎನ್ನುವ ಸಂಕಲ್ಪ ನಮ್ಮದು.
ಈ ಬಾರಿ “ಲಾಂಛನದ ಲಕ್ಷದೀಪ” ಎನ್ನುವ ಪರಿಕಲ್ಪನೆಯು 3ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ನಮ್ಮ ಈ ಸಂಕಲ್ಪದಲ್ಲಿ ತಾವೂ ನಮ್ಮವರಾಗಿ ಎನ್ನುವ ಪ್ರಾರ್ಥನೆ ನಮ್ಮದು.
-ಶಶಾಂಕ್ ಶಿವತ್ತಾಯ
9632601459