ಉಡುಪಿ: ಪ್ರತಿಯೊಬ್ಬರಿಗೆ ನೀಡುವ ಶಿಕ್ಷಣದಿಂದ ವೈಯಕ್ತಿಕ ಬೆಳವಣಿಗೆ ಜತೆಗೆ ದೇಶದ ಪ್ರಗತಿ ಸಾಧ್ಯ ಎಂದು ರೋಟರಿ ಜಿಲ್ಲೆ 3182 ಗವರ್ನರ್ ಡಾ. ಜಯಗೌರಿ ಹೇಳಿದರು. ಅವರು ಹೋಟೆಲ್ ಕಿದಿಯೂರಿನ ಮಾಧವ ಕೃಷ್ಣ ಸಭಾಂಗಣದಲ್ಲಿ ರೋಟರಿ ಜಿಲ್ಲೆ 3182, ವಲಯ 3ಮತ್ತು 4 ಇದರ ವತಿಯಿಂದ ಜ್ಞಾನ ಪೂರಣ ಕಾರ್ಯಕ್ರಮದಡಿ ರಾಷ್ಟ್ರೀಯ ಶಿಕ್ಷಣ ನೀತಿ: ರೋಟರಿ ಜಿಲ್ಲಾ ಸಾಕ್ಷರತಾ ಕಾರ್ಯಾಗಾರ ಹಾಗೂ ಉಡುಪಿ ಜಿಲ್ಲೆಯ ಆಯ್ದ ಶಿಕ್ಷಕರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಜ್ಞಾನ, ಅರಿವು ಹೊಂದುವಲ್ಲಿ ಶಿಕ್ಷಕರು ಮಹತ್ತರ ಪಾತ್ರ ವಹಿಸಬೇಕು ಎಂದರು. ರೋಟರಿ ಜಿಲ್ಲೆ 2024, 25ನೇ ಸಾಲಿನ ಗವರ್ನರ್ ಸಿಎ ದೇವಾನಂದ ಮಾತನಾಡಿ, ಚಾರಿತ್ರ್ಯ ನಿರ್ಮಾಣಕ್ಕಿರುವ ಶಿಕ್ಷಣದ ಮೂಲಕ ಭವಿಷ್ಯದ ಉತ್ತಮ ಜನಾಂಗವನ್ನು ಶಿಕ್ಷಕರು ರೂಪಿಸಬಲ್ಲರು. ಬದಲಾವಣೆ ಜಗದ ನಿಯಮ, ಹೊಸ ಹೊಸ ವಿಚಾರ, ನೀತಿಗಳಿಗೆ ಅನುಗುಣವಾಗಿ ನಾವು ನಡೆಯಬೇಕು.
ರಾಷ್ಟ್ರೀಯ ಶಿಕ್ಷಣ ನೀತಿಗೆ ತಕ್ಕಂತೆ ಶಿಕ್ಷಕರು ತರಬೇತಿ ಪಡೆದು ತಜ್ಞರಾದರೆ ಮಕ್ಕಳಿಗೆ ಕಲಿಕೆ ಸುಲಭ. ಸುಪ್ತ ಪ್ರತಿಭೆಯನ್ನು ಶಿಕ್ಷಣದಿಂದ ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸುವ ಮೂಲಕ ಸತ್ಪ್ರಜೆಗಳನ್ನಾಗಿಸಬೇಕು. ಸ್ವಾಮಿ ವಿವೇಕಾನಂದರ ಪ್ರಕಾರ ಮನುಷ್ಯನಲ್ಲಿರುವ ಪರಿಪೂರ್ಣತೆ ವ್ಯಕ್ತ ಮಾಡುವ ಪ್ರಕ್ರಿಯೆ ಶಿಕ್ಷಣವಾಗಿದ್ದು ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ನಿಭಾಯಿಸಬೇಕು ಎಂದರು.
ಮೂಲ ಶಿಕ್ಷಣ ಡಿಸ್ಟ್ರಿಕ್ಟ್ ಚೇರ್ಮನ್ ಡಾ. ಶ್ರೀಕಾಂತ ಪ್ರಭು, ವಲಯ 4ರ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ, ಡಯಟ್ ಉಪಪ್ರಾಂಶುಪಾಲ ಡಾ. ಅಶೋಕ ಕಾಮತ್, ಅಮಿತ್ ಅರವಿಂದ್ ಉಪಸ್ಥಿತರಿದ್ದರು.
ನಟರಾಜ್ ಪ್ರಾರ್ಥಿಸಿದರು. ವಲಯ3ರ ಸಹಾಯಕ ಗವರ್ನರ್ ಆನಂದ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಸಾಕ್ಷರತಾ ಸಮಿತಿ ಸಭಾಪತಿ ಅಶೋಕ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿದರು. ಜನಾರ್ದನ ಭಟ್ ಮತ್ತು ಹೇಮಂತ್ ಕಾಂತ್ ನಿರೂಪಿಸಿದರು.
ನಂತರ ನಡೆದ ವಿವಿದ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಣಿಪಾಲದ ಮಾಹೆಯ ಅಂತರಾಷ್ಟ್ರೀಯ ಶೈಕ್ಷಣಿಕ ಸಂಯೋಜಕರಾದ ಪ್ರೊ. ಕರುಣಾಕರ ಕೋಟೆಕಾರ್, ಡಯಟ್ ಉಪಪ್ರಾಂಶುಪಾಲರಾದ ಡಾ. ಅಶೋಕ ಕಾಮತ್, ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಒ.ಆರ್. ಪ್ರಕಾಶ್, ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ತಮ್ಮ ವಿಚಾರವನ್ನು ಮಂಡಿಸಿದರು. ನಂತರ ಕಲ್ಲಡ್ಕದ ವಿಠಲ ನಾಯ್ಕ್ ಲಘು ಭಾಷಣದಿಂದ ಸಭಿಕರನ್ನು ರಂಜಿಸಿದರು. ಜಿಲ್ಲೆಯ ಆಯ್ದ ಶಿಕ್ಷಕರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ಪ್ರಧಾನ ಮಾಡಲಾಯಿತು.