ಸುಳ್ಯ: ಸುಮಾರು ಒಂದೂವರೆ ಶತಮಾನದಷ್ಟು ದೀರ್ಘ ಅವಧಿಯಲ್ಲಿ ನಡೆದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬದುಕನ್ನೇ ಬಲಿಕೊಟ್ಟ ವೀರರು ಅನೇಕರಿದ್ದರು. ಅವರ ಬಲಿದಾನದ ಕಥೆಗಳುಳ್ಳ ಕೃತಿ ಯನ್ನು ಪುತ್ತೂರಿನ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಡಾ. ಕೆ. ಪ್ರಭಾಕರ ಭಟ್ ಗುರುವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತಾಡಿದ ಅವರು, ಸಂಸ್ಕೃತಿ ಎಂದರೆ ಏನೆಂದು ತಿಳಿಯದಿದ್ದ ಬ್ರಿಟಿಷರು ಭಾರತೀಯರಿಗೆ ನಾಗರಿಕತೆಯ ಪಾಠವನ್ನು ಹೇಳಿ, ಭಾರತೀಯರ ಬುದ್ಧಿವಂತಿಕೆಯನ್ನು ಸಂಪೂರ್ಣವಾಗಿ ಆಂಗ್ಲಮಯ ಮಾಡಲು ಹೊರಟಿದ್ದರು. ಆದರೆ ಯುರೋಪಿಗಿಂತ ಮೊದಲೇ ಭಾರತೀಯರಲ್ಲಿ ಪರಿಶುದ್ಧವಾದ ಸಂಸ್ಕೃತಿ, ಸಂಸ್ಕಾರ, ನಾಗರಿಕತೆ ಮತ್ತು ಸುಜ್ಞಾನವಿತ್ತು.
ಭಾರತೀಯರ ಸಜ್ಜನಿಕೆಯೇ ಅವರಿಗೆ ಮುಳುವಾಯಿತು. ತಕ್ಕಡಿ ಹಿಡಿದು ವ್ಯಾಪಾರಕ್ಕೆ ಬಂದವರು ಭಾರತೀಯರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಆಳತೊಡಗಿದಾಗ ದೇಶದ ಮೂಲೆಮೂಲೆಗಳಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿತು. ಸ್ವಂತ ಸುಖವನ್ನು ನೋಡದೆ ಹೋರಾಟಕ್ಕೆ ಇಳಿದ ಅದೆಷ್ಟೋ ವೀರರ ಕಥೆಯೇ ನಮಗೆ ಗೊತ್ತಿಲ್ಲ. ಅಂತಹ ಅಪ್ರಕಾಶಿತ ಹೋರಾಟಗಾರರ ಕಥೆಯನ್ನೇ ಈ ಕೃತಿಯಲ್ಲಿ ದಾಮ್ಲೆಯವರು ಸಂಗ್ರಹಿಸಿ ಕೊಟ್ಟಿದ್ದಾರೆ.
ಸ್ನೇಹ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಾಡಿರುವ ಈ ಒಳ್ಳೆಯ ಕೆಲಸಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಏನಿದ್ದರೂ ಸ್ವಾತಂತ್ರ್ಯವೆಂಬುದು ಒಬ್ಬ ವ್ಯಕ್ತಿಗಾಗಲೀ ಒಂದು ಪಕ್ಷಕ್ಕಾಗಲೀ ದೊರಕಿದ್ದಲ್ಲ. ಅದು ಸಮಗ್ರ ಭಾರತವೇ ಗಳಿಸಿದ ಪ್ರಜ್ಞೆ. ಅದನ್ನು ಉಳಿಸಿಕೊಳ್ಳುವ ಜಾಗೃತಿ ನಮ್ಮಲ್ಲಿರಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶೇಷವಾಗಿ ಹೊರತರಲಾದ ಕೃತಿ ಅಪ್ರಕಾಶಿತ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿದ ಶ್ರದ್ಧಾಂಜಲಿಯಾಗಿದೆ. ಇನ್ನು ಅದೆಷ್ಟೋ ಕಾಲಕ್ಕೆ ಅವರ ಸ್ಮರಣೆ ಜಾಗೃತವಾಗಿರುವಂತೆ ಈ ಕೃತಿ ಉಪಯುಕ್ತವಾಗಿದೆ ಎಂದು ಹೇಳಿದರು.
ಆರಂಭದಲ್ಲಿ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯ ಬಳಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಗಣ್ಯ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಮುಖ್ಯೋಪಾಧ್ಯಾಯನಿ ಜಯಲಕ್ಷ್ಮಿ ದಾಮ್ಲೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ 75 ಸ್ವಾತಂತ್ರ್ಯ ಸೇನಾನಿಗಳ ಸರಣಿ ಸ್ಮರಣೆ ಕಾರ್ಯಕ್ರಮದ ಹಾಗೂ ಪ್ರಸ್ತುತ ಕೃತಿರಚನೆಯ ಉದ್ದೇಶವನ್ನು ತಿಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕ ದೇವಿಪ್ರಸಾದ ಜಿ. ಸಿ. ಕಾಯರ್ತೋಡಿ ಧನ್ಯವಾದವಿತ್ತರು. ಶಿಕ್ಷಕಿ ಸವಿತಾ ಎಂ ನಿರೂಪಿಸಿದರು.
ಈ ಸಂದರ್ಭದಲ್ಲಿ ಕಮಲ ಪ್ರಭಾಕರ ಭಟ್, ಎನ್. ಏ. ರಾಮಚಂದ್ರ, ಎಸ್. ಎನ್ ಮನ್ಮಥ, ಭಾಗೀರಥಿ, ಯಶೋಧ ರಾಮಚಂದ್ರ, ಶ್ರೀನಿವಾಸ್ ಉಬರಡ್ಕ, ಪಿಕೆ ಉಮೇಶ, ಡಾ. ಕೃಷ್ಣ ಭಟ್, ಡಾ. ವಿದ್ಯಾ ಶಾರದ, ಆಶಾ ಬೆಳ್ಳಾರೆ, ಸಂತೋಷ್ ಕುತ್ತಮೊಟ್ಟೆ, ಶಾಲಾ ಶಿಕ್ಷಕ ವೃಂದದವರು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.