ಕಾಪು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಬೆಂಗಳೂರು ಪ್ರಾಯೋಜಕತ್ವದಲ್ಲಿ ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಸಾರಥ್ಯದಲ್ಲಿ ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ವಿಕಲಚೇತನರಿಗೆ ಪರಿಕರ ವಿತರಣಾ ಕಾರ್ಯಕ್ರಮ ಶ್ರೀ ಅಧೀಶಕ್ತಿ ವೀರಭದ್ರ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂತಹ ಕಾರ್ಯಕ್ರಮಗಳು ಪ್ರತಿ ಕ್ಷೇತ್ರಗಳಲ್ಲಿಯೂ ನಡೆಯಬೇಕು. ತನ್ಮೂಲಕ ವಿಶೇಷ ಚೇತನರ ಬಾಳಿನಲ್ಲಿ ಬೆಳಕು ಕಾಣಬಹುದು ಎಂದ ಅವರು ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇವರ ಕಾರ್ಯ ಸ್ತುತ್ಯರ್ಹ ಎಂದರು.
ಮುಖ್ಯ ಅತಿಥಿಗಳಾಗಿದ್ದ ಕವಿ, ಲೇಖಕ ಕೆ.ವಿ.ಲಕ್ಷ್ಮಣಮೂರ್ತಿ ಮಾತನಾಡಿ, ಇದೊಂದು ಮಾದರಿ ಕಾರ್ಯಕ್ರಮ. ಇದರಿಂದಾಗಿ ಅನೇಕರು ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಎನ್.ಎಸ್.ಸಿ.ಡಿ.ಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ ಮಾತನಾಡಿ, ಇದು ವಿಶೇಷ ಚೇತನರ ಬಾಳಿನಲ್ಲಿ ಬೆಳಕು ಚೆಲ್ಲುವ ಕಾರ್ಯಕ್ರಮ ಎಂದು ಹೇಳಿದರು.
15 ಹೊಲಿಗೆ ಯಂತ್ರ, 3 ಗಾಲಿ ಕುರ್ಚಿ ಮತ್ತು 1 ಶ್ರವಣ ಸಾಧನ ವಿಶೇಷ ಚೇತನರಿಗೆ ಹಸ್ತಾಂತರಿಸಲಾಯಿತು. ಡಾ. ನೆಲ್ಲಿಷಾ, ಲಾವಣ್ಯ, ಕೆ.ಎಸ್.ಎಸ್.ಎ.ಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಶ್ರುತಿ ಎಂಟರ್ಪ್ರೈಸಸ್ ಮಾಲಕ ಸುರೇಶ್ ಮತ್ತು ಎನ್.ಎಸ್.ಸಿ.ಡಿ.ಎಫ್ ಸದಸ್ಯೆ ಹರಿಣಾಕ್ಷಿ ಮುಂತಾದವರು ಉಪಸ್ಥಿತರಿದ್ದರು.