ಮಣಿಪಾಲ: ಪ್ರಸಿದ್ಧ ಫ್ರೆಂಚ್ ಚಲನಚಿತ್ರ ನಿರ್ದೇಶಕ ಜೀನ್ ಲುಕ್ ಗೊಡಾರ್ಡ್ ಅವರು ಸಾಂಪ್ರದಾಯಿಕ ನಿರೂಪಣಾ ಮಾದರಿಗಳನ್ನು ಮುರಿದು, ವಿಭಿನ್ನ ರೀತಿಯ ಚಲನಚಿತ್ರಗಳನ್ನು ನಿರ್ಮಿಸಿದರು ಮತ್ತು ಆ ಮೂಲಕ ಫ್ರೆಂಚ್ ಹೊಸ ಅಲೆಯ ಪ್ರವರ್ತಕರಾದರು ಎಂದು ಲೇಖಕ- ವಿಮರ್ಶಕ ಪ್ರೊ ಫಣಿರಾಜ್ ಹೇಳಿದರು.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಯೋಜಿಸಿದ್ದ ಗೊಡಾರ್ಡ್ ಗೌರವಾರ್ಥ ಕಾರ್ಯಕ್ರಮ ಮತ್ತು ಗೊಡಾರ್ಡ್ ನ ಚಲನಚಿತ್ರ ‘ಬ್ರೆತ್ ಲೆಸ್’ ಪ್ರದರ್ಶನದ ಸಂದರ್ಭದಲ್ಲಿ ಮಾತನಾಡಿದ ಅವರು, ಗೊಡಾರ್ಡ್ ತನ್ನ ಕೃತಿಗಳಲ್ಲಿ ಪ್ರಾರಂಭ, ಮಧ್ಯ ಮತ್ತು ಅಂತ್ಯದ ಸಾಂಪ್ರದಾಯಿಕ ನಿರೂಪಣೆಯನ್ನು ಮುರಿದು ಅದನ್ನು ಸಂಪೂರ್ಣವಾಗಿ ಮರು ವ್ಯಾಖ್ಯಾನಿಸಿ, ವಿಭಿನ್ನವಾಗಿ ಮರುಕ್ರಮಗೊಳಿಸಿದ್ದಾರೆ.
ಅವರಿಗೆ ಸಿನಿಮಾ ಎನ್ನುವುದು ಚಿತ್ರಗಳ ನಿರಂತರ ಸಂಯೋಜನೆ. ಒಬ್ಬ ದೃಶ್ಯರೂಪದಲ್ಲಿ ಕಥೆಯನ್ನು ಹೇಗೆ ಹೇಳುತ್ತಾನೆ ಎನ್ನುವುದು ಹೆಚ್ಚು ಮುಖ್ಯವಾಗಿತ್ತು ಎಂದರು. ಸಿನಿಮಾದಲ್ಲಿ ಪ್ರಯೋಗಕ್ಕೆ ಹೆಚ್ಚು ಮಹತ್ವ ನೀಡಿದ್ದ ಗೊಡಾರ್ಡ್ ಆಗ ಅಸ್ತಿತ್ವದಲ್ಲಿದ್ದ ಎಲ್ಲಾ ಸಂಪ್ರದಾಯಗಳನ್ನು ಬದಲಾಯಿಸಿದರು ಮಾತ್ರವಲ್ಲದೆ ತಮ್ಮದೇ ಚಿತ್ರಗಳು ಕಟ್ಟಿದ್ದ ಸಂಪ್ರದಾಯಗಳನ್ನೂ ಮುರಿದರು. ಅವರ ಚಲನಚಿತ್ರಗಳು ಮನರಂಜನೆಯ ಸ್ವರೂಪದ ಮೇಲಿನ ತಾತ್ವಿಕ ಕನ್ನಡಿ ಎಂದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಸಂವಾದವನ್ನು ನಡೆಸಿಕೊಟ್ಟರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಗೊಡಾರ್ಡ್ ಅವರ ಬ್ರೆತ್ ಲೆಸ್ ನ ಪ್ರದರ್ಶನ ಮತ್ತು ಚರ್ಚೆಯಲ್ಲಿ ಭಾಗವಹಿಸಿದ್ದರು.