ಬ್ರಹ್ಮಾವರ: ಕೊಕ್ಕರ್ಣೆಯ ಪೆಜಮಂಗೂರು ಗ್ರಾಮದ ಚಗ್ರಿಬೆಟ್ಟು ಪ್ರದೇಶದಲ್ಲಿ ಸೇತುವೆ ಕಾಮಗಾರಿಯ ವೇಳೆ ಶಾಸನವೊಂದು ಪತ್ತೆಯಾಗಿದ್ದರ ಬಗ್ಗೆ ಕೊಕ್ಕರ್ಣೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀ ಅವರು ಮಾಹಿತಿ ನೀಡಿದ್ದು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ – ಉಡುಪಿ ಇದರ ಆಡಳಿತಾಧಿಕಾರಿ ಡಾ. ಬಿ.ಜಗದೀಶ ಶೆಟ್ಟಿಯವರ ನೇತೃತ್ವದಲ್ಲಿ ಈ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ನಡೆಸಿರುತ್ತಾರೆ.
ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನದ ಕೆಳಭಾಗವು ತುಂಡಾಗಿದ್ದು ಪ್ರಸ್ತುತ ತುಂಡಾದ ಶಾಸನವು 2 ಅಡಿ ಎತ್ತರ ಮತ್ತು 2 ಅಡಿ ಅಗಲವನ್ನು ಹೊಂದಿದೆ. 16 ಸಾಲುಗಳನ್ನು ಹೊಂದಿರುವ ಶಾಸನವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದ್ದು, ಮೇಲ್ಭಾಗದಲ್ಲಿ ಶಿವಲಿಂಗ, ಇಕ್ಕೆಲಗಳಲ್ಲಿ ದೀಪಕಂಬ, ನಂದಿ ಮತ್ತು ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ.
“ಶ್ರೀ ಗಣಾಧಿಪತಯೆ ನಮ” ಎಂಬ ಶ್ಲೋಕದಿಂದ ಪ್ರಾರಂಭವಾಗುವ ಈ ಶಾಸನವು ಇಮ್ಮಡಿ ದೇವರಾಯನ ಕಾಲಕ್ಕೆ ಸೇರಿದ್ದು, ಕಾಲಮಾನವು ಶಕವರುಷ 1364 ದುಂದುಭಿ ಸಂವತ್ಸರ ಎಂದಿದೆ. ಅಂದರೆ ಈ ಕಾಲಮಾನವು ಕ್ರಿ.ಶ 1442ಕ್ಕೆ ಸರಿ ಹೊಂದುತ್ತದೆ.
ಈ ಕಾಲದಲ್ಲಿ ಬಾರಕೂರ ರಾಜ್ಯವನ್ನು ಇಮ್ಮಡಿ ದೇವರಾಯನ ನಿರೂಪದಿಂದ ಮಹಾಪ್ರಧಾನ ಚಂಡರಸ ಒಡೆಯನು ಆಳ್ವಿಕೆ ಮಾಡುತ್ತಿದ್ದ. ಉಳಿದಂತೆ ಶಾಸನದಲ್ಲಿ ಬೊಂಮಣ, ಗೋವಿಂದ ಸೆಟಿ, ಶಂಕರ ನಾರಾಯಣ, ಕುದು (ಪ್ರಸ್ತುತ ಕುದಿ ಗ್ರಾಮ ಆಗಿರಬಹುದು) ಎಂಬ ಹೆಸರುಗಳ ಉಲ್ಲೇಖ ಕಂಡು ಬರುತ್ತದೆ.
ಈ ಶಾಸನವು ಶಂಕರ ನಾರಾಯಣ ದೇವರಿಗೆ ಕೊಟ್ಟಿರಬಹುದಾದ ದಾನ ಶಾಸನವಾಗಿರಬಹುದೆಂದು ಡಾ. ಬಿ.ಜಗದೀಶ ಶೆಟ್ಟಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಈ ಶಾಸನವನ್ನು ಚಗ್ರಿಬೆಟ್ಟು ಪ್ರದೇಶದಿಂದ ರಾಷ್ಟ್ರಕವಿ ಸಂಶೋಧನ ಕೇಂದ್ರ-ಉಡುಪಿಗೆ ರಕ್ಷಣಾ ದೃಷ್ಟಿಯಿಂದ ರವಾನಿಸಲಾಗಿದೆ. ಕ್ಷೇತ್ರಕಾರ್ಯ ಶೋಧನೆಯಲ್ಲಿ ಲಕ್ಷ್ಮೀ, ರಾಘವೇಂದ್ರ ಕೊಡ್ಲಯ ಹಾಗೂ ನಾಗೇಶ್ ನಾಯಕ್ ಸಹಕಾರ ನೀಡಿರುತ್ತಾರೆ.