Saturday, November 23, 2024
Saturday, November 23, 2024

ಯುವಜನರಲ್ಲಿ ದೇಶಪ್ರೇಮ, ದೇಶಾಭಿಮಾನ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ : ಸಂಸದ ಪ್ರತಾಪ್ ಸಿಂಹ

ಯುವಜನರಲ್ಲಿ ದೇಶಪ್ರೇಮ, ದೇಶಾಭಿಮಾನ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ : ಸಂಸದ ಪ್ರತಾಪ್ ಸಿಂಹ

Date:

ಉಡುಪಿ: ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಯುವಜನರಿಗೆ ಅರಿವು ಮೂಡಿಸುವ ಹಾಗೂ ಅವರಲ್ಲಿ ದೇಶಪ್ರೇಮ, ದೇಶಾಭಿಮಾನ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತಿಹಾಸ ಗೊತ್ತಿದ್ದಲ್ಲಿ ಮಾತ್ರ ಯಾರೊಬ್ಬರು ಇತಿಹಾಸವನ್ನು ಸೃಷ್ಠಿಸಲು ಸಾಧ್ಯ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಬಗ್ಗೆ ಪ್ರತಿಯೊಬ್ಬರು ತಿಳಿಯುವುದರೊಂದಿಗೆ ದೇಶಪ್ರೇಮವನ್ನು ಹಾಗೂ ದೇಶಾಭಿಮಾನವನ್ನು ಬೆಳೆಸಿಕೊಂಡು ನಾವು ಪಡೆದಿರುವ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗಬೇಕಿದೆ ಎಂದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅನೇಕ ಮಹಾನ್ ನಾಯಕರುಗಳಾದ ಝಾನ್ಸಿರಾಣಿ ಲಕ್ಷ್ಮೀಬಾಯಿ, ತಾಂತ್ಯಾ ಟೋಪಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಬಾಲಾ ಗಂಗಾಧರ ತಿಲಕ, ಸುಭಾಸ್ ಚಂದ್ರ ಬೋಸ್ ರವರ ಹೋರಾಟವನ್ನು ನೆನಪಿಸಿಕೊಳ್ಳಬೇಕು ಎಂದರು.

1857 ರ ಮೊದಲ ಸ್ವಾತಂತ್ರ್ಯ ಹೋರಾಟದ ಸಿಪಾಯಿ ದಂಗೆಯ ಬಗ್ಗೆ ವೀರ ಸಾವರ್ಕರ್ ರವರು ಪುಸ್ತಕವನ್ನು ಬರೆಯುವ ಮೂಲಕ ಸ್ವಾತಂತ್ರ್ಯ ಹೋರಾಟದ ಕೆಚ್ಚೆದೆಯನ್ನು ಎಲ್ಲರೊಡನೆ ಮೂಡಿಸಿದರು. ಇದಕ್ಕೆ ಪ್ರತಿಯಾಗಿ ಬ್ರಿಟಿಷರು ಅವರನ್ನು ಅಂಡಾಮನ್ ನಿಕೋಬಾರ್ ಜೈಲಿಗೆ ಕಳುಹಿಸಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರತ್ಯೇಕತೆಯ ಕೂಗಿಗೆ ನೀವು ಬಂದರೆ ನಮ್ಮ ಜೊತೆ, ನೀವು ಬರದಿದ್ದರೆ ನಿಮ್ಮನ್ನು ಬಿಟ್ಟು, ನೀವು ಅಡ್ಡ ನಿಂತರೆ ನಿಮ್ಮನ್ನು ಮೆಟ್ಟಿ ಹೋರಾಟ ಮಾಡುತ್ತೇವೆ ಎಂದು ಹೇಳಿದ ಮಹಾನ್ ನಾಯಕರ ಜನ್ಮ ದಿನದಂದು ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಉಡುಪಿ ಭಾಗದ ಜನರ ಕೊಡುಗೆ ಅಪಾರ ಎಂದ ಅವರು, ನಾವೆಲ್ಲರೂ ಸೇರಿ ದೇಶ ಕಟ್ಟುವುದರ ಜೊತೆಗೆ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗಲು ನಾವೆಲ್ಲರೂ ಭಾಗಿದಾರರಾಗಬೇಕು ಎಂದರು.

ಶಾಸಕ ಲಾಲಾಜಿ ಮೆಂಡನ್ ಮಾತನಾಡಿ ಸ್ವಾತಂತ್ರ್ಯ ಹೋರಾಟಕ್ಕೆ ತ್ಯಾಗ ಬಲಿದಾನ ಮಾಡಿದ ನಾಯಕರುಗಳನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ರವರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು ಎಂದರು. ಎಲ್ಲಾ ರೀತಿಯ ಮೂಲಭೂತ ಸೌಕರ‍್ಯಗಳು ಹಾಗೂ ಸರ್ಕಾರದ ಸವಲತ್ತುಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ತಲುಪಿಸುವ ಕೆಲಸ ಜನಪ್ರತಿನಿಧಿಗಳಿಂದ ಆಗಬೇಕು ಎಂದರು.

ಶಾಸಕ ಕೆ ರಘುಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಸಂಸ್ಕೃತಿ ಇಲಾಖೆಯು ಸರ್ವಜನರಲ್ಲಿ ದೇಶಾಭಿಮಾನವನ್ನು ಮೂಡಿಸುವಂತಹ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಆಯೋಜಿಸಿದೆ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಉಡುಪಿಯ ಜನತೆ ಸಕ್ರಿಯವಾಗಿ ಭಾಗವಹಿಸಿ ಮುಂಚೂಣಿಯಲ್ಲಿದ್ದರು. ಅಜ್ಜರಕಾಡು ಸ್ವಾತಂತ್ರ್ಯ ಹೋರಾಟದ ಪ್ರದೇಶವಾಗಿತ್ತು. ಇಲ್ಲಿಗೆ ಮಹಾತ್ಮ ಗಾಂಧೀಜಿಯವರು 1934 ಫೆಬ್ರವರಿ 25 ರಂದು ಬಂದು ಸ್ವಾತಂತ್ರ್ಯ ಹೋರಾಟದ ಭಾಷಣವನ್ನು ಮಾಡಿದ್ದರು.

ಈ ಸಂದರ್ಭದಲ್ಲಿ ಭಾರತಿ ಬಾಯಿಯವರು ತಮ್ಮೆಲ್ಲ ಆಭರಣವನ್ನು ನೀಡಿದ್ದರು. ಡಾ. ನಾಯಕ್ ರವರು ಮಗುವಾಗಿದ್ದಾಗ ತನ್ನ ಎರಡೂ ಬಂಗಾರದ ಒಡವೆಯನ್ನು ಹೋರಾಟದ ನಿಧಿಗೆ ನೀಡುವುದರ ಜೊತೆಗೆ ತಮ್ಮ ಜೀವನ ಪರ್ಯಂತ ನಿರಾಭರಣರಾಗಿದ್ದರು ಎಂಬ ವಿಷಯವನ್ನು ನೆನಪಿಸಿಕೊಂಡರು.

ಸ್ವಾತಂತ್ರ್ಯ ಹೋರಾಟದಲ್ಲಿ ಉಡುಪಿಯ ಅಷ್ಠಮಠದ ಸ್ವಾಮೀಜಿಯವರು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ವಿಭುದೇಶ ತೀರ್ಥ ಸ್ವಾಮಿಜಿಯವರು ಸ್ವಾತಂತ್ರ್ಯ ಹೋರಾಟದ ಪ್ರಚೋದನಕಾರಿ ಭಾಷಣ ಮಾಡಿದ ಕಾರಣಕ್ಕೆ ಅವರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು ಎಂದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಎಲ್ಲರಿಗೂ ಸಂಕಲ್ಪ ವಿಧಿಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಯಶವಂತ್ ರಾಜ್ ಬನ್ನಂಜೆ ಮತ್ತು ತಂಡದಿಂದ ದೇಶಭಕ್ತಿ ಗಾಯನ, ಪವನ್ ಆಚಾರ್ ಮತ್ತು ತಂಡದಿಂದ ಪಂಚವೀಣೆಯಲ್ಲಿ ದೇಶಭಕ್ತಿ ನುಡಿಸುವಿಕೆ, ಸ್ವಾತಂತ್ರ್ಯ ಹೋರಾಟ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮರಾವ್ ಎಂ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್ ಕಲ್ಮಾಡಿ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಶೋಕ್ ಕಾಮತ್ ನಿರೂಪಿಸಿದರು. ಯುವ ಜನ ಕ್ರೀಡಾ ಇಲಾಖೆಯ ರೋಶನ್ ಶೆಟ್ಟಿ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಉಡುಪಿಯ ಅಜ್ಜರಕಾಡಿನ ಭುಜಂಗ ಶೆಟ್ಟಿ ಪಾರ್ಕಿನಲ್ಲಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ಗಣ್ಯರು, ಸಾರ್ವಜನಿಕರು, ವಿದ್ಯಾರ್ಥಿಗಳು ವಿವಧ ಸಂಘಟನೆಯ ಪದಾಧಿಕಾರಿಗಳು ಹಾಗೂ ವಿವಿಧ ಕಲಾ ತಂಡಗಳು ಮೆರವಣಿಗೆ ಮೂಲಕ ವೇದಿಕೆ ಕಾರ್ಯಕ್ರಮ ತಲುಪಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲೆಯಲ್ಲಿ ಕೆ.ಎಫ್.ಡಿ ಪ್ರಕರಣಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ

ಉಡುಪಿ, ನ.22: ಕ್ಯಾಸನೂರು ಅರಣ್ಯ ರೋಗವು ಅಥವಾ ಮಂಗನ ಜ್ವರ ಕಾಯಿಲೆಯು...

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...

ಆನಂದತೀರ್ಥ: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.22: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಆನಂದತೀರ್ಥ ಪ.ಪೂ ಕಾಲೇಜು...

ಸಾಂಸ್ಕೃತಿಕ ಸ್ಪರ್ಧೆ: ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿಗಳ ಅಮೋಘ ಸಾಧನೆ

ಉಡುಪಿ, ನ.22: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ...
error: Content is protected !!