ಮಂಗಳೂರು: ಪ್ರತಿಯೊಂದು ಕಾಲೇಜುಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಮಹತ್ವವಾಗಿದ್ದು, ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಸುವ ಅವಕಾಶಗಳು ಹೆಚ್ಚಾಗಿದೆ ಎಂದು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಉದಯಕುಮಾರ್ ಇರ್ವತ್ತೂರು ಹೇಳಿದರು.
ಅವರು ಇಂದು ಡಾ. ಪಿ. ದಯಾನಂದ ಪೈ-ಪಿ ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ವತಿಯಿಂದ ಕಾಲೇಜು ಸಭಾಂಗಣದಲ್ಲಿ ಸ್ನೇಹ ಸಂಗಮ 2022 ಮತ್ತು ನ್ಯಾಕ್ ಪುನಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನ್ಯಾಕ್ ಮೌಲ್ಯಮಾಪನ ದೃಷ್ಟಿಯಲ್ಲಿ ಹಿರಿಯ ವಿದ್ಯಾರ್ಥಿಗಳ ತೊಡಗಿಸುಕೊಳ್ಳುವಿಕೆ, ಸಕ್ರಿಯತೆ, ನಾನಾ ರೀತಿಯ ಸಮಾಜಮುಖಿ ಕೆಲಸಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಉತ್ತಮ ಮೌಲ್ಯಾಂಕವನ್ನು ಪಡೆಯಬಹುದಾಗಿದೆ. ಪ್ರತಿವರ್ಷ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಹೋಗುವಾಗ ಕಾಲೇಜಿನಲ್ಲಿ ಪಡೆದ ಅವಕಾಶಗಳನ್ನು ಮರೆಯದೇ ಕಿರಿಯ ವಿದ್ಯಾರ್ಥಿಗಳಿಗೆ ಸ್ಪಂದಿಸುವ ಸಂಯೋಜಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ. ಪಿ. ದಯಾನಂದ ಪೈ-ಪಿ ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಪ್ರಾಂಶುಪಾಲರಾದ ಪ್ರೊ. ರಾಜಶೇಖರ್ ಹೆಬ್ಬಾರ್ ಅವರು, ಪ್ರತಿಯೋರ್ವ ವಿದ್ಯಾರ್ಥಿಯ ಬಾಳಿಗೆ ಶಿಕ್ಷಣವೇ ಬೆಳಕು. ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ಪ್ರಾಪಂಚಿಕ ಜ್ಞಾನವನ್ನು ಪಡೆಯಬೇಕು.
ಬೇರೆ ಬೇರೆ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಕಾಲೇಜಿನಲ್ಲಿ ಸಿಗುವ ಅವಕಾಶಗಳ ಸದ್ಬಳಕೆ ಮಾಡಿಕೊಂಡರೆ ಉಜ್ವಲ ಭವಿಷ್ಯವನ್ನು ಕಾಣಬಹುದು. ತಂದೆ, ತಾಯಿ ಗುರುಗಳಿಂದ ಪಡೆದ ಮಾರ್ಗದರ್ಶನ ಉತ್ತಮ ವ್ಯಕ್ತಿತ್ವ ರೂಪಿಸಲು ಸಹಕಾರಿ ಎಂದರು.
ಶೈಕ್ಷಣಿಕವಾಗಿ, ಲಲಿತಕಲೆ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಲರ್ಸ್ ಕನ್ನಡ ಚ್ಯಾನಲ್ ನಲ್ಲಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆದ ಹಿರಿಯ ವಿದ್ಯಾರ್ಥಿ ಸಂದೇಶ್ ನೀರುಮಾರ್ಗ ಇವರನ್ನು ಅಭಿನಂದಿಸಲಾಯಿತು.
ಹಿರಿಯ ವಿದ್ಯಾರ್ಥಿ ಸಂಘ (ರಿ.) ಸಂಯೋಜಕರಾದ ಡಾ. ಶೇಷಪ್ಪ ಅಮೀನ್ ಸ್ವಾಗತಿಸಿದರು. ಸಮಾಜಕಾರ್ಯ ವಿಭಾಗ ಮುಖ್ಯಸ್ಥರಾದ ಅರುಣಾಕುಮಾರಿ, ಲಲಿತಕಲಾ ಸಂಘದ ಸಂಯೋಜಕರಾದ ಡಾ. ಕೃಷ್ಣಪ್ರಭಾ, ದೈಹಿಕ ಶಿಕ್ಷಣ ನಿರ್ದೇಶಕರಾದ ಮಹಮ್ಮದ್ ರಫೀಕ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗುರುಪ್ರಸಾದ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಧೀರಜ್ ಕುಮಾರ್ ವಂದಿಸಿದರು. ತೇಜಸ್ವಿನಿ ಹಾಗೂ ಮೋಹಿತ್ ಕಾರ್ಯಕ್ರಮ ನಿರೂಪಿಸಿದರು.