ಮಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ದೇಶ ಮತ್ತು ಜಾಗತಿಕವಾಗಿ ಅಭಿವೃದ್ಧಿ ಗುರಿಯೊಂದಿಗೆ ಸಮುದಾಯಿಕ ಚಿಂತನೆ ಇಟ್ಟುಕೊಂಡು ಶಕ್ತಿಯುತವಾಗಿ ಬೆಳೆಯುವ ಗುರಿ ಇಟ್ಟುಕೊಳ್ಳಬೇಕು ಎಂದು ಪದ್ಮಶ್ರೀ ಟಿವಿ ಮೋಹನದಾಸ್ ಪೈ ಕರೆ ನೀಡಿದರು.
ಅವರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆದ ಜಿಪಿಎಲ್ ಉತ್ಸವ 2022ದಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು.
ಮುಂದಿನ ದಶಕದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಸಮುದಾಯದ ಅಭಿವೃದ್ಧಿ ಇಟ್ಟುಕೊಂಡು ಮಾದರಿ ಕೆಲಸ ಮಾಡೋಣ ಎಂದು ಅವರು ಹೇಳಿದರು.
ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಆಯೋಜಿಸುವ ಫುಜ್ಲಾನಾ ಜಿಪಿಎಲ್ 2022 ರ ಈ ಬಾರಿಯ ಟ್ರೋಫಿ ವಳಲಂಕೆ ಫೈಟರ್ಸ್ ಮೂಲ್ಕಿ ಇದರ ಮುಡಿಗೇರಿದೆ.
ಬಹಳ ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಡ್ಲಿ ಫ್ಯಾಂಥರ್ಸ್ ಏಳು ಓವರ್ ಗಳಲ್ಲಿ 26 ರನ್ ಗಳ ಗುರಿಯನ್ನು ನೀಡಿತ್ತು. ಆದರೆ ಈ ಅತ್ಯಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟುವಲ್ಲಿ ಎಡವಿದ ವಳಲಂಕೆ ಫೈಟರ್ಸ್ ಮೂಲ್ಕಿ ಆರು ವಿಕೆಟ್ ಗಳನ್ನು ಕಳೆದುಕೊಂಡು ಒಂದು ಹಂತದಲ್ಲಿ ಶರಣಾಗುವ ಸೂಚನೆಯನ್ನು ಕೂಡ ನೀಡಿತ್ತು.
ಆದರೆ ಕೊನೆಯ ಹಂತದಲ್ಲಿ ಏಳನೇ ವಿಕೆಟಿಗೆ ನಡೆದ ಜೊತೆಯಾಟದ ಮೂಲಕ ತಂಡ ಗೆಲುವಿನ ಗುರಿಯನ್ನು ಸಾಧಿಸಿ ಮೊದಲ ಬಾರಿಗೆ ಪ್ರತಿಷ್ಠಿತ ಜಿಪಿಎಲ್ ಟ್ರೋಫಿಯನ್ನು ಗೆದ್ದು ಬೀಗಿತು.
ಫೈನಲ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿದ ವಳಲಂಕೆ ಫೈಟರ್ಸ್ ತಂಡದ ಅಗ್ನಿ ರಾಮಚಂದ್ರ ಗಾಂವಕರ್ ಪಂದ್ಯ ಪುರುಷರಾಗಿ ಆಯ್ಕೆಯಾದರು.
ಜಿಪಿಎಲ್ 2022ರ ಉದಯೋನ್ಮುಖ ಆಟಗಾರರಾಗಿ ಕೊಡಿಯಾಲ್ ಸೂಪರ್ ಕಿಂಗ್ ನ ನಿಶ್ಚಿತ್ ಪೈ, ಅತ್ಯುತ್ತಮ ಎಸೆತಗಾರರಾಗಿ ಡೆಡ್ಲಿ ಫ್ಯಾಂಥರ್ಸ್ ನ ಅತುಲ್ ಪ್ರಭು, ಅತ್ಯುತ್ತಮ ದಾಂಡಿಗರಾಗಿ ವಳಲಂಕೆ ಫೈಟರ್ಸ್ ಇದರ ಪ್ರಜ್ವಲ್ ಶೆಣೈ, ಅತ್ಯುತ್ತಮ ಕ್ಷೇತ್ರ ರಕ್ಷಕರಾಗಿ ಆಭರಣ ಡೈಮಂಡ್ಸ್ ನ ಸತೀಶ್ ಕಾಮತ್ ಆಯ್ಕೆಯಾದರು.
ಪೈ ಸೇಲ್ಸ್ ಪ್ರಾಯೋಜಿತ ಝೀಕ್ಸರ್ ಬೈಕ್ ಅನ್ನು ಸರಣಿಶ್ರೇಷ್ಠ ಆಟಗಾರರಾಗಿ ಆಯ್ಕೆಯಾದ ಕೋಟಾ ಗಣೇಶ್ ನಾಯಕ್ ಅವರಿಗೆ ಪೈ ಸೇಲ್ಸ್ ನ ಗಣಪತಿ ಪೈ ಮತ್ತು ರತ್ನಾಕರ ಪೈ ಅವರು ಹಸ್ತಾಂತರಿಸಿದರು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಫುಜ್ಲಾನಾ ಗ್ರೂಪಿನ ಸುರೇಶ್ ಪೈ, ಅರುಣಾ ಮಸಾಲದ ಅನಂತೇಶ್ ಪ್ರಭು, ಯಜಮಾನ ಇಂಡಸ್ಟ್ರೀಸ್ ನ ವರದರಾಜ ಪೈ, ಭಾರ್ಗವಿ ಬಿಲ್ಡರ್ಸ್ ನ ಭಾಸ್ಕರ್ ಗಡಿಯಾರ್, ಉದ್ಯಮಿ ಮುಂಡ್ಕೂರು ರಾಮದಾಸ್ ಕಾಮತ್, ದೇವಗಿರಿ ಟೀನ ನಂದಗೋಪಾಲ ಶೆಣೈ, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಹನುಮಂತ ಕಾಮತ್, ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್ ಉಪಸ್ಥಿತರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಸುನೀಲ್ ಕುಮಾರ್, ಶಾಸಕ ಡಾ. ಭರತ್ ಶೆಟ್ಟಿ, ಹ್ಯಾಂಗ್ಯೋ ಐಸ್ ಕ್ರೀಂನ ಪ್ರದೀಪ್ ಪೈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆರ್ ಜೆ ಕಿರಣ್ ಶೆಣೈ ನಿರೂಪಿಸಿದರು.