ನವದೆಹಲಿ: ದೇಶಾದ್ಯಂತ ಹಲವಾರು ತಿಂಗಳ ನಂತರ ಇಂದು ಒಂದೇ ದಿನ ಕೋವಿಡ್ 19 ಪಾಸಿಟಿವ್ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದೆ.
ರಾಜ್ಯದಲ್ಲಿಯೂ 300ರ ಒಳಗೆ ದಾಖಲಾಗುತ್ತಿದ್ದ ಪಾಸಿಟಿವ್ ಪ್ರಕರಣಗಳು ಇಂದು ದಿಢೀರನೆ 707ಕ್ಕೆ ಏರಿದೆ. ಏತನ್ಮಧ್ಯೆ ಮಹಾರಾಷ್ಟ್ರ, ದೆಹಲಿಯಲ್ಲಿ ಹಲವಾರು ತಿಂಗಳ ಬಳಿಕ ಪಾಸಿಟಿವ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಉಭಯ ಕಡೆಗಳಲ್ಲಿ ಒಂದೇ ದಿನ 200ಕ್ಕಿಂತ ಹೆಚ್ಚು ಒಮಿಕ್ರಾನ್ ಪ್ರಕರಣಗಳು ಕಂಡುಬಂದಿವೆ.
ಟ್ವಿಟರ್ ನಲ್ಲಿ ಇದೀಗ ಕೊರೊನಾ ಮೂರನೇ ಅಲೆ “ಥರ್ಡ್ ವೇವ್” ಹ್ಯಾಶ್ ಟ್ಯಾಗ್ ಮೂಲಕ ಟ್ರೆಂಡ್ ಆಗುತ್ತಿದ್ದು ಈ ಕುರಿತು ಅಂಕಿ ಅಂಶಗಳನ್ನು ಪೋಸ್ಟ್ ಮಾಡುವ ಮೂಲಕ ನೆಟ್ಟಿಗರು ವ್ಯಾಪಕ ಚರ್ಚೆಯಲ್ಲಿ ತೊಡಗಿದ್ದಾರೆ.
ಮೂರನೇ ಅಲೆಯಲ್ಲಿ ಎರಡನೆಯ ಅಲೆಗಿಂತ ಶೇಕಡ 150 ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಸರಕಾರ ಎಚ್ಚರಿಸಿದೆ.
ಇದಕ್ಕೆ ಪೂರಕವೆಂಬಂತೆ ಡಿ. 14ರಂದು 6481 ಇದ್ದ ಸಕ್ರಿಯ ಪ್ರಕರಣಗಳು ಡಿ. 30 ರಂದು 18,217 ದಾಟಿದೆ. ಮುಂಬಯಿಯಲ್ಲಿ ಸಕ್ರಿಯ ಪ್ರಕರಣಗಳು 11,360ಕ್ಕೆ ಏರಿದೆ.