ಬೆಳಗಾವಿ: ಕೇದಾರೋತ್ಥಾನ ಟ್ರಸ್ಟ್ ಉಡುಪಿ ಮೂಲಕ “ಹಡಿಲು ಭೂಮಿ ಕೃಷಿ ಅಂದೋಲನ”ದಡಿ ಸಾವಯವ ಕೃಷಿ ಮಾಡಿ ಬೆಳೆದಿರುವ ಭತ್ತದಿಂದ ಉತ್ಪಾದಿಸಿದ ಸಂಪೂರ್ಣ ಸಾವಯವ ಕುಚ್ಚಲಕ್ಕಿ “ಉಡುಪಿ ಕೇದಾರ ಕಜೆ” ಬೆಳಗಾವಿಯ ಸಂಕಮ್ ರೆಸಿಡೆನ್ಸಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಹಡಿಲು ಭೂಮಿ ಕೃಷಿ ಬಗ್ಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸುವಲ್ಲಿ ಶಾಸಕ ರಘುಪತಿ ಭಟ್ ಮತ್ತು ತಂಡದ ಕಾರ್ಯ ಶ್ಲಾಘನೀಯ. ಮನುಷ್ಯ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ.
ಕೃಷಿ ಸೇವೆಯು ದೇಶ ಸೇವೆಯಾಗಿದೆ. ಕೃಷಿ ಭೂಮಿಯನ್ನು ಹಡಿಲು ಬಿಡುವುದು ಭೂಮಿ ತಾಯಿಗೆ ಅನ್ಯಾಯ ಮಾಡಿದಂತೆ. ಕೇದಾರೋತ್ಥಾನ ಟ್ರಸ್ಟ್ ನ ಈ ಕ್ರಾಂತಿಕಾರಿ ಹೆಜ್ಜೆ ರಾಜ್ಯಕ್ಕೆ ಮಾದರಿ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್, ಕೇದಾರೋತ್ಥಾನ ಟ್ರಸ್ಟ್ ಮೂಲಕ ಹಡಿಲು ಭೂಮಿಯಲ್ಲಿ ತಾವೇ ಭತ್ತ ಬೆಳೆದು ರೈತರಿಗೆ ಮಾದರಿಯಾಗಿದೆ. ಹಡಿಲು ಭೂಮಿಯಲ್ಲಿ ಭತ್ತ ಬೆಳೆಯುವ ಮೂಲಕ ಸ್ವಾವಲಂಬನೆಯ ಜೀವನ ನಡೆಸಲು ಯುವಕರಿಗೆ ಮಾರ್ಗದರ್ಶನ ನೀಡುವ ಕಾರ್ಯ ಇದಾಗಿದೆ ಎಂದರು.
ಕೇದಾರೋತ್ಥಾನ ಟ್ರಸ್ಟ್ ಅಧ್ಯಕ್ಷರು, ಶಾಸಕ ಕೆ. ರಘುಪತಿ ಭಟ್ ಅವರು ಮಾತನಾಡಿ, ಹಡಿಲು ಭೂಮಿ ಕೃಷಿ ಮಾಡಲು ನಮ್ಮೊಂದಿಗೆ ಕೈಜೋಡಿಸಿದ ಎಲ್ಲರಿಗೂ ಹಾಗೂ ಎಲ್ಲಾ ಸಂಘಟನೆಗಳಿಗೂ ಕೃತಜ್ಞತೆಗಳನ್ನು ಸಲ್ಲಿಸಿ ರೈತರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಉಡುಪಿ ಕೇದಾರ ಕಜೆ ಕುಚ್ಚಲಕ್ಕಿ ಮಾರುಕಟ್ಟೆಗೆ ಸಹಕರಿಸಬೇಕು ಎಂದರು.
ಈ ಅಕ್ಕಿಯನ್ನು “ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ” ಮೂಲಕ ಮಾರಾಟ ಮಾಡಲಾಗುತ್ತಿದ್ದು, ಇದರ ಆನ್‌ಲೈನ್ ಖರೀದಿ ವೆಬ್ಸೈಟ್ಗೆ ಮುಖ್ಯಮಂತ್ರಿ ಚಾಲನೆ ನೀಡಿದರು.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ. ಸುನಿಲ್ ಕುಮಾರ್, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್ ಅಂಗಾರ, ಶಾಸಕರುಗಳಾದ ವೇದವ್ಯಾಸ್ ಕಾಮತ್, ಉಮಾನಾಥ ಕೋಟ್ಯಾನ್, ರಾಜು ಗೌಡ, ಹರೀಶ ಪೂಂಜ, ರಾಜೇಶ ನಾಯಕ್, ಸಂಜೀವ ಮಠಂದೂರು, ಬಿ.ಎಂ.ಸುಕುಮಾರ ಶೆಟ್ಟಿ, ಸಂಕಮ್ ರೆಸಿಡೆನ್ಸಿ ಮಾಲಕರಾದ ವಿಠ್ಠಲ್ ಹೆಗ್ಡೆ, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕೋಶಾಧಿಕಾರಿಗಳಾದ ಕೆ. ರಾಘವೇಂದ್ರ ಕಿಣಿ, ಕೃಷಿ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿಗಳಾದ ಶಂಕರ್ ಹಾಗೂ ಬೆಳಗಾವಿ ಭಾಗದ ಉಡುಪಿ ದಕ್ಷಿಣ ಕನ್ನಡ ಮೂಲದ ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.