ಉಡುಪಿ: ಮೂಕಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು ಸವಾಲಿನ ಕೆಲಸವಾಗಿದ್ದು, ಪಶುವೈದ್ಯರು ಅವುಗಳನ್ನು ಪರೀಕ್ಷಿಸಿ, ಅವುಗಳಿಗೇನಾಗಿದೆ ಎಂಬುದನ್ನು ಸೂಕ್ಷ್ಮವಾಗಿ ಅರಿತು ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು.
ಅವರು ನಗರದ ಪಶುವೈದ್ಯಕೀಯ ಪಾಲಿಕ್ಲಿನಿಕ್‌ನಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಎರಡನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮವನ್ನು ಗೋಪೂಜೆ ನೆರೆವೇರಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಜಾನುವಾರು ಗಣತಿಯ ಪ್ರಕಾರ ಜಿಲ್ಲೆಯಲ್ಲಿ 2.57 ಲಕ್ಷ ಜಾನುವಾರುಗಳಿದ್ದು, ಎಲ್ಲಾ ಜಾನುವಾರುಗಳಿಗೆ ನಿಗಧಿತ ಅವಧಿಯೊಳಗೆ ಕಾಲು ಬಾಯಿ ಲಸಿಕೆಯನ್ನು ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಲಸಿಕಾ ಕಾರ್ಯಕ್ರಮದ ಕುರಿತು ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಸಾಕಷ್ಟು ಮುಂಚಿತವಾಗಿ ಮಾಹಿತಿ ನೀಡಿ ಲಸಿಕಾ ಕಾರ್ಯಕ್ಕೆ ಅರ್ಹವಿರುವ ಎಲ್ಲಾ ಜಾನುವಾರುಗಳಿಗೆ ಲಸಿಕೆ ನೀಡಿ ಶೇ 100 ರಷ್ಟು ಪ್ರಗತಿ ಸಾಧಿಸುವಂತೆ ತಿಳಿಸಿದರು. ಲಸಿಕಾ ಕಾರ್ಯವನ್ನು ಗಣಕೀಕೃತ ವ್ಯವಸ್ಥೆಯಲ್ಲಿ ನಡೆಸುವ ಕುರಿತು ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ ಮಾತನಾಡಿ, ಕೋವಿಡ್ ಮತ್ತು ಅಕಾಲಿಕ ಮಳೆಯಿಂದಾಗಿ ಆರ್ಥಿಕ ನಷ್ಟ ಅನುಭವಿಸುತ್ತಿರುವ ಹೈನುಗಾರಿಕೆಯನ್ನೇ ಅವಲಂಭಿಸಿರುವ ರೈತರಿಗೆ ಲಸಿಕಾ ಕಾರ್ಯಕ್ರಮದಿಂದ ಆರ್ಥಿಕ ಪ್ರಯೋಜನವಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪಶುಪಾಲನಾ ಇಲಾಖೆ ವತಿಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿನ ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕೆ ನೀಡುವ ಅಭಿಯಾನ ಕಾರ್ಯಕ್ರಮವು ಡಿಸೆಂಬರ್ 17 ರಿಂದ ಆರಂಭವಾಗಿ ಒಂದು ತಿಂಗಳವರೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಶಂಕರ ಶೆಟ್ಟಿ ಕೆ., ಪಶುವೈದ್ಯಕೀಯ ಪಾಲಿಕ್ಲಿನಿಕ್‌ನ ಉಪನಿರ್ದೇಶಕ ಡಾ.ದಯಾನಂದ ಪೈ, ಜಿಲ್ಲಾ ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.