ನವದೆಹಲಿ: ತಮಿಳುನಾಡಿನ ಕುನೂರಿನಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡು ರಕ್ಷಣಾ ಪಡೆಯ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಹೆಲಿಕಾಪ್ಟರ್ ನಲ್ಲಿದ್ದ ಇತರ 11 ಮಂದಿ ಸಾವನ್ನಪ್ಪಿದ್ದಾರೆ.
ವಾಯುಪಡೆಯ ಹೆಲಿಕಾಪ್ಟರ್ Mi17 V5 ಇಂದು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನೂರ್ ಸಮೀಪದ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ.
ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನಲ್ಲಿ ಸಿಬ್ಬಂದಿಯಲ್ಲದೆ, ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ, ಸಿಬ್ಬಂದಿ ಮತ್ತು ಕುಟುಂಬ ಸದಸ್ಯರು ಸಹ ಇದ್ದರು.
ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್ ನಲ್ಲಿರುವ ಡಿಫ಼ೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ಸಲುವಾಗಿ ರಾವತ್ ಅವರು ಸೂಲೂರು ವಾಯುನೆಲೆಯಿಂದ ಪ್ರಯಾಣ ಬೆಳೆಸಿದ್ದರು.
ಅಪಘಾತದ ಕಾರಣವನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ಪ್ರಧಾನಿ ಸಂತಾಪ: ಜನರಲ್ ಬಿಪಿನ್ ರಾವತ್ ಒಬ್ಬ ಅತ್ಯುತ್ತಮ ಸೈನಿಕರಾಗಿದ್ದರು. ನಿಜವಾದ ದೇಶಭಕ್ತರಾಗಿದ್ದ ಅವರು ನಮ್ಮ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಉಪಕರಣಗಳನ್ನು ಆಧುನೀಕರಿಸುವಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ.
ಕಾರ್ಯತಂತ್ರದ ವಿಷಯಗಳ ಬಗ್ಗೆ ಅವರ ಒಳನೋಟಗಳು ಮತ್ತು ದೃಷ್ಟಿಕೋನಗಳು ಅಸಾಧಾರಣವಾಗಿವೆ. ಅವರ ಅಗಲಿಕೆ ನನಗೆ ಅತೀವ ದುಃಖ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.