ಉಡುಪಿ: ಅತಿ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಇಬ್ಬರ ಸಾವಿಗೆ ಕಾರಣವಾದ ಆರೋಪಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ಜೈಲುಶಿಕ್ಷೆ ವಿಧಿಸಿದೆ.
2015 ಜುಲೈ 19 ರಂದು ಬೆಳಗ್ಗೆ 10 ಗಂಟೆಗೆ ಹಿರಿಯಡ್ಕದ ಪ್ರಥಮ ದರ್ಜೆ ಕಾಲೇಜ್ ಗೇಟ್ ಬಳಿ ಯೋಹಾನ್ ಎಂಬಾತನು ತನ್ನ ಕಾರನ್ನು ಪೆರ್ಡೂರು ಕಡೆಯಿಂದ ಹಿರಿಯಡ್ಕ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಸರಸ್ವತಿ ಹಾಗೂ ದಿತಿ ಮತ್ತು ತೇಜಸ್ವಿ ಎಂಬ ಬಾಲಕಿಯರಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಈ ಅಪಘಾತದಲ್ಲಿ ಸರಸ್ವತಿ ಮತ್ತು ಬಾಲಕಿ ದಿತಿ ಮೃತಪಟ್ಟಿದ್ದು, ಇನ್ನೋರ್ವ ಬಾಲಕಿ ತೇಜಸ್ವಿಗೆ ತೀವ್ರ ಸ್ವರೂಪದ ಗಾಯಗಳಾಗಿರುವ ಹಿನ್ನೆಲೆ, ಹಿರಿಯಡ್ಕ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ದೀಪಾ ರವರು ಆರೋಪಿ ಯೋಹಾನ್‌ಗೆ 6 ತಿಂಗಳ ಕಾಲ ಶಿಕ್ಷೆ ವಿಧಿಸಿ, ತೀರ್ಪು ನೀಡಿರುತ್ತಾರೆ.
ಸರಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಬದರೀನಾಥ್ ನಾಯರಿ ವಾದ ಮಂಡಿಸಿರುತ್ತಾರೆ.