ಮಲ್ಪೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕ ರಾಘವ ನಾಯ್ಕ್ ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸಮಾಜಶಾಸ್ತ್ರ ವಿಭಾಗಕ್ಕೆ ಸಲ್ಲಿಸಿದ “ದಿ ರೋಲ್ ಆಫ್ ಹಾಲಕ್ಕಿ ವುಮೆನ್ ಆಫ್ ಉತ್ತರ ಕನ್ನಡ ಡಿಸ್ಟ್ರಿಕ್ಟ್ ಇನ್ ಇಕೊನೋಮಿಕ್ ಪ್ರೊಡಕ್ಟಿವಿಟಿ ಆ್ಯಂಡ್ ಇಕೊಲೋಜಿಕಲ್ ಸಸ್ಟೃನೆಬಿಲಿಟಿ – ಎ ಸೋಶಿಯೋಲಾಜಿಕಲ್ ಸ್ಟಡಿ” ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಅವರು ಕರ್ನಾಟಕದ ಪ್ರತಿಷ್ಠಿತ ಸಮಾಜಶಾಸ್ತ್ರ ಪ್ರಾಧ್ಯಾಪಕರು ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೊ. ಜಯಶ್ರೀ ಎಸ್. ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಸಿದ್ಧಪಡಿಸಿದ್ದರು. ರಾಘವ ನಾಯ್ಕ್ ಮೂಲತಃ ಬ್ರಹ್ಮಾವರ ಕೆಂಜೂರಿನವರಾಗಿದ್ದು ಎಸ್.ಎಂ.ಎಸ್. ಕಾಲೇಜು ಬ್ರಹ್ಮಾವರದಲ್ಲಿ ಬಿ.ಎ. ಪದವಿ ಪಡೆದಿದ್ದು, ತದನಂತರ ಮಂಗಳೂರು ವಿ.ವಿ. ಸಮಾಜಶಾಸ್ತ್ರ ವಿಭಾಗದಿಂದ ಎಂ.ಎ. ಪದವಿ ಪಡೆದಿರುತ್ತಾರೆ.
ಭುವನೇಂದ್ರ ಕಾಲೇಜು ಕಾರ್ಕಳ, ಮಹಾವೀರ ಕಾಲೇಜು ಮೂಡಬಿದ್ರೆ ಇಲ್ಲಿ ಸೇವೆ ಸಲ್ಲಿಸಿದ ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಪಾಪು ಹಾಗೂ ಕಾರವಾರಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ
ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿ ಎಂ.ಎ. ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ವಿವಿಧ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.