ಯಾವಾಗ ನಿಲ್ಲತ್ತಪ್ಪಾ ಈ ಮಳೆ, ಸಾಕಾಗಿ ಹೋಯ್ತು. ಗದ್ದೆಯಲ್ಲಿ ಭತ್ತ ಚಂಡಿಯಾಗಿ ಬೆದೆಗೆ ಬಂದಿದೆ. ಹುಲ್ಲೂ ಪೂರ್ತಿ ಸರಾಗ ಮಳೆಗೆ ನೆನೆದು ಕೊಳೆಯುತ್ತಿದೆ. ಅಡಿಕೆ, ಒಣ ಹಾಕಲು ಆಗದೇ ಪೂರ್ತಿ ಹಾಳಾಗಿ ಹೋಯ್ತು. ನವರಾತ್ರಿ ಕಳೆದು, ದೀಪಾವಳಿ ಮುಗಿದು ಕೆಲ ವಾರಗಳೇ ಸಂದರೂ ಮಳೆ ಮಾತ್ರ ನಿಲ್ಲುತ್ತಿಲ್ಲ. ಮಳೆಗಾಲದ ಪ್ರಾರಂಭದಲ್ಲಿ ಇರುವಂತೆ ಎಲ್ಲೆಲ್ಲೂ ಗಿಜಿ ಗಿಜಿ. ಯಾವಾಗ ಸೂರ್ಯನನ್ನು ನೋಡುತ್ತೇವೋ.. ಈ ರೀತಿಯ ಉದ್ಗಾರಗಳು ಈಗ ಎಲ್ಲರ ಬಾಯಲ್ಲೂ.
ಈ ವರ್ಷ ಯಾಕೆ ಹೀಗೆ?
ಅರಬೀ ಸಮುದ್ರ ಬಿಸಿಯಾಗಿದೆ:
ಭಾರತದ ಪಶ್ಚಿಮದ ಹಿಂದೂ ಮಹಾಸಾಗರವು, ಪೂರ್ವದ ಬಂಗಾಳ ಕೊಲ್ಲಿಯ ಸಮುದ್ರಕ್ಕಿಂತ ಯಾವಾಗಲೂ ತಂಪು. ವಿಜ್ಞಾನಿಗಳ ಪ್ರಕಾರ ಇಲ್ಲಿಯವರೆಗೆ ಹಿಂದೂ ಮಹಾಸಾಗರದ ಸರಾಸರಿ ಉಷ್ಣತೆ 28 ಡಿಗ್ರಿ ಸೆಲ್ಸಿಯಸ್ ಕ್ಕಿಂತ ಕಡಿಮೆ. ಆದರೆ ಬಂಗಾಳ ಕೊಲ್ಲಿಯ ಉಷ್ಣತೆ 31 ಡಿಗ್ರಿ ಸೆಲ್ಸಿಯಸ್ ಕ್ಕಿಂತ ಹೆಚ್ಚು.
ಹಾಗಾಗಿ ಅರಬೀ ಸಮುದ್ರದಲ್ಲಿ ಚಂಡಮಾರುತಗಳು ಕಡಿಮೆ. ಚಂಡಮಾರುತ ಸೃಷ್ಟಿಯಾಗಬೇಕಾದರೆ ಸಮುದ್ರದ ಉಷ್ಣತೆಯ ಮಿತಿ 28 ಡಿಗ್ರಿ ಸೆಲ್ಸಿಯಸ್. ಜೂನ್ ನ ಮೊದಲೇ ಮುಂಗಾರು ಮಳೆ ಪ್ರಾರಂಭವಾಗಿ, ಸಪ್ಟೆಂಬರ್ ಅಂತ್ಯದಲ್ಲಿ ಈ ಮಳೆ ನಿಂತು ಹಿಂಗಾರು ಮಳೆ ಪ್ರಾರಂಭವಾಗಿ ಆಗಲೇ ಮುಗಿದು ಅಕ್ಟೋಬರ್ ಅಂತ್ಯಕ್ಕೆ ಚಳಿಗಾಲ ಪ್ರಾರಂಭವಾಗುವುದು ಮಾಮೂಲಿ. ಆದರೆ ಈ ವರ್ಷ ನವಂಬರ್ ಮುಗಿಯುತ್ತಾ ಬಂದರೂ ಮಳೆ ನಿಲ್ಲುತ್ತಿಲ್ಲ. ಅದರಲ್ಲೂ ಮಳೆಯ ಕ್ರಮವೇ ವ್ಯತ್ಯಾಸವಾಗಿದೆ.
ಇಡೀ ತಿಂಗಳು ಹೊಯ್ಯುವ ಮಳೆ ಒಂದೇ ದಿನದಲ್ಲಿ ಬುರಬುರನೆ ಹೊಯ್ದು ನೀರೊ ನೀರು. ಎಲ್ಲೆಲ್ಲೂ ಅವಾಂತರ ಆತಂಕ. ಎಲ್ಲಾ ಕಡೆ ಮೇಘ ಸ್ಪೋಟ. ಸರಕಾರಗಳು ಕನಿಷ್ಟ ಕ್ರಮವನ್ನೂ ತೆಗೆದುಕೊಳ್ಳಲೂ ಅವಕಾಶವೇ ಇಲ್ಲದಂತೆ ಪ್ರಕೃತಿಯ ರುದ್ರ ನರ್ತನ. ಸಮುದ್ರ ಮಟ್ಟಕ್ಕೆ ಸಮನಾಗಿರುವ ತೀರದ ಮಹಾ ನಗರಗಳಾದ ಮುಂಬಯಿ, ಚೆನ್ನೈ, ತಿರುವನಂತಪುರಂಗಳಲ್ಲಿ ಅನೇಕ ಕಡೆಗಳಲ್ಲಿ ಅವ್ಯವಸ್ಥೆ ತಾಂಡವ. ಜನರ ಪರದಾಟ.
ಇದೇಕೆ ಹೀಗೆ?
ಮುಂಗಾರು ಮಳೆ ಪ್ರಾರಂಭ ಹಾಗೂ ಮುಗಿಯುವ ಕಾಲದಲ್ಲಿ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಹೆಚ್ಚು. ಅರಬೀ ಸಮುದ್ರದಲ್ಲಿ ಚಂಡ ಮಾರುತ ಅತೀ ವಿರಳ. ವಿಜ್ಞಾನಿಗಳ ಪ್ರಕಾರ ಈಗ ಅರಬೀ ಸಮುದ್ರದ ಉಷ್ಣತೆ ಮಾಮೂಲಿಗಿಂತ ಹೆಚ್ಚಾಗಿರುವುದು ಪ್ರಮುಖ ಕಾರಣ.
ಸರಾಸರಿ 27 ಡಿಗ್ರಿ ಉಷ್ಣತೆಯಿಂದ ತಂಪಾಗಿದ್ದ ನಮ್ಮ ಪರಶುರಾಮನ ಸೃಷ್ಟಿಯ ಅರಬೀ ಸಮುದ್ರ ಈಗ 29 ಡಿಗ್ರಿ ಗಿಂತಲೂ ಅಧಿಕ ವಾಗಿರುವದರಿಂದ ಬಂಗಾಳ ಕೊಲ್ಲಿಯಲ್ಲಿ ಸಂಭವಿಸುವಂತೆ ಇಲ್ಲೂ ಚಂಡಮಾರುತ ಹೆಚ್ಚಾಗುತ್ತಿದೆ. ಈ ವರ್ಷ ಅರಬೀ ಸಮುದ್ರದಲ್ಲಿ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುವ ಚಂಡಮಾರುತಕ್ಕಿಂತ ಹೆಚ್ಚಾಗಿದೆ. ಇದೊಂದು ಎಚ್ಚರಿಕೆಯ ಕರೆಗಂಟೆ.
ಹವಾಮಾನ ಬದಲಾವಣೆ:
ಈಗ ಅತೀ ಹೆಚ್ಚು ಹುಚ್ಚು ಮಳೆ, ಛಳಿಗಾಲದಲ್ಲಿ ತಡಕೊಳ್ಳಲಾಗದ ಛಳಿ ಹಾಗೂ ಮೈ ಸುಟ್ಟೇ ಹೊಗುವುದೋ ಎನ್ನುವಂತಹ ಬಿಸಿಲು, ಅನೇಕ ಚಂಡಮಾರುತಗಳು ಈ ಎಲ್ಲಾ ಬದಲಾವಣೆಗಳಿಗೆ ಪ್ರಮುಖ ಕಾರಣಗಳನ್ನು ವಿಜ್ಞಾನಿಗಳು ತಿಳಿಸಿದ್ದಾರೆ.
1. ಪ್ರಕೃತಿ ರಮ್ಯ ಪಶ್ಚಿಮ ಘಟ್ಟಗಳ ನಾಶ:
ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳ ಗಳನ್ನು ಅಪ್ಪಿಕೊಂಡಿರುವ ಭಾರತದ ಭವ್ಯ ಪಶ್ಚಿಮ ಘಟ್ಟದ ಸಾಲುಗಳಲ್ಲಿ ಅತಿಯಾದ ಅರಣ್ಯ ನಾಶ ಹಾಗೂ ಗಣಿಗಾರಿಕೆ ಈ ಹವಾಮಾನ ಬದಲಾವಣೆಗೆ ಪ್ರಮುಖ ಕಾರಣ.
ಸುಮಾರು 1600 ಕಿಮೀ ಉದ್ದವಿರುವ ಈ ಪರ್ವತ ಶ್ರೇಣಿ, 140000 ಚದರ ಕಿಮೀ ವ್ಯಾಪಿಸಿದೆ. ವಿಶ್ವ ಜೀವ ವೈವಿಧ್ಯತೆಯ ತಾಣವಾಗಿರುವ ಈ ನಮ್ಮ ಪಶ್ಚಿಮ ಘಟ್ಟ ದಕ್ಷಿಣ ಭಾರತದಲ್ಲಿರುವ ಅನೇಕ ನದಿಗಳ ಉಗಮ ತಾಣ. ಕಳೆದ 17 ವರ್ಷಗಳಲ್ಲಿ ಸುಮಾರು 20,000 ಹೆಕ್ಟೇರ್ ಅರಣ್ಯ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.
ಸುಮಾರು ಲಕ್ಷೋಪಲಕ್ಷ ವರ್ಷಗಳಿಂದ ಬೆಳೆದುಬಂದಿರುವ ಈ ಹಸಿರು ಸಂಪತ್ತಿನ ಪರಿಸರದ ನಾಶ ಸರಿಪಡಿಸಲಸಾಧ್ಯ.ಇದರ ಪರಿಣಾಮ ಈ ವಿಚಿತ್ರ ಹವಾಮಾನ ಬದಲಾವಣೆಗಳೆಂದು ವಿಜ್ಞಾನಿಗಳು ಅನೇಕ ಬಾರಿ ಎಚ್ಚರಿಸಿದ್ದರು.
ಈಗ ನಡುಕ ಹುಟ್ಟುವ ರೀತಿಯಲ್ಲಿ ಪ್ರಕೃತಿ ಮುನಿದಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ, ಕೇರಳದ ಭೂ ಕುಸಿತ, ನೆರೆ ಹಾವಳಿಗೆ 2019 ರಲ್ಲೇ ಕಾಡು ನಾಶ ಮತ್ತು ಮಳೆಯ ಅವಾಂತರಗಳ ನೇರ ಸಂಬಂಧವನ್ನು ತಿಳಿಸಿ ಎಚ್ಚರಿಸಿದೆ. ಈ ಪಶ್ಚಿಮ ಘಟ್ಟದ ಪರಿಸರ ನಾಶದಿಂದ ಇಡೀ ಭಾರತದಲ್ಲಿ ಮುಂಗಾರು ಹಿಂಗಾರು ಮಳೆಗಳ ಅವ್ಯವಸ್ಥೆಯನ್ನು ಗಮನಿಸಬಹುದು.
2. ಭೂಮಿಯ ವಾತಾವರಣದ ಉಷ್ಣತೆ 1.5 ಕ್ಕಿಂತ ಏರಿಕೆ:
ಭೂಮಿಯ ಹಿತಮಿತವಾದ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ನ ಪ್ರಮಾಣ ಅದೆಷ್ಟು ಹೆಚ್ಚಿದೆ ಎಂದರೆ ಊಹೆಗೂ ನಿಲುಕದಷ್ಟು. ಈಗ ಎಲ್ಲಾ ರಾಷ್ಟಗಳೂ ತಮ್ಮ ತಪ್ಪನ್ನು ಇತರರಿಗೆ ಹೇರುತ್ತಿವೆ. ಈ ಕಲುಷಿತ ವಾತಾವರಣದಿಂದ ಭೂಮಿಯ ಉಷ್ಣತೆ ಕಳೆದ ಕೆಲ ವರ್ಷಗಳಲ್ಲಿ ಏರುತ್ತಿದೆ.
ಇದರ ಪರಿಣಾಮ ಧ್ರುವ ಪ್ರದೇಶದ ಹಿಮಗಡ್ಡೆಗಳು ಕರಗಿ ಸಮುದ್ರ ಸೇರಿ ಸಮುದ್ರ ಮಟ್ಟವನ್ನು ಏರಿಸುತ್ತಿವೆ. ಇದರಿಂದಾಗಿ ಸಮುದ್ರ ತೀರ ಮುಳುಗುವ ಸ್ಥಿತಿಯಲ್ಲಿದೆ. ಒಂದು ಅಂದಾಜಿನ ಪ್ರಕಾರ ಸುಮಾರು 25 ವರ್ಷಗಳಲ್ಲಿ ಭೂಮಿಯ ಸಮುದ್ರ ತೀರದ ಅನೇಕ ಪ್ರದೇಶಗಳೆಲ್ಲ ಮುಳುಗಲಿವೆ.
ಅದರಲ್ಲಿ ನಮ್ಮ ಭಾರತದ ಮಂಬೈ, ಸೂರತ್, ಗೋವಾ, ಕೇರಳ, ಕರ್ನಾಟಕದ ಕೆಲ ತೀರಗಳು ಚೆನ್ನೈ, ಕಲ್ಕತ್ತಾ ಹಾಗೂ ವಿಶಾಖಪಟ್ಟಣ ಅಪಾಯಕಾರಿ ಸ್ಥಿತಿಯಲ್ಲಿವೆ. ಈ ತೀರ ಪ್ರದೇಶಗಳ ಸುಮಾರು 28 ಮಿಲಿಯ ಜನರಿಗೆ ತೊಂದರೆ ಖಂಡಿತ.
ಎಚ್ಚರಿಕೆಯ ಮುನ್ಸೂಚನೆ:
ಈ ವರ್ಷದ ಭಾರತದ ವಿಚಿತ್ರ ಮಳೆ ಇನ್ನು ಮುಂದೆ ಪ್ರತೀ ವರ್ಷ ಮುಂದುವರಿಯಲಿದೆ. 2030 ರ ವರೆಗಂತೂ ಖಂಡಿತವೆಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಭಾರತದಲ್ಲಿ ಮಳೆ ಬರುವಲ್ಲಿ, ಈ ವಿಚಿತ್ರ ಮಳೆ ಹೆಚ್ಚಾಗಲಿದೆ, ಮಳೆ ಬರದೆ ಭೂಮಿ, ಬರಡಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈಗೇನು ಮಾಡಬೇಕು?
ಇನ್ನಾದರೂ ಕೂಡಲೇ ಎಲ್ಲಾ ರಾಷ್ಟಗಳೂ ಸರಿಯಾದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ. ಪರಿಸ್ಥಿತಿಯ ಅರಿವು ಆಗಬೇಕಿದೆ. ಪ್ರಕೃತಿ ನಾಶ ನಮ್ಮ ನಾಶ ವೆಂಬ ಎಚ್ಚರಿಕೆಯಿಂದ ಪ್ರಕೃತಿಯ ಸಮತೋಲನವನ್ನು ಉಳಿಸಲು ಶ್ರಮಿಸಲೇಬೇಕಾದ ಅನಿವಾರ್ಯತೆ ಬಂದಿದೆ.
ಸಸ್ಯ ಸಂಪತ್ತು, ಭೂ ಸಂಪತ್ತು ಹಾಗೂ ಪರಿಸರ ಸಂಪತ್ತನ್ನು ಮುಂದಿನ ತಲೆಮಾರಿಗೆ ಆದಷ್ಟು ಉಳಿಸುವ ಪ್ರಯತ್ನ ಪ್ರಾಮಾಣಿಕವಾಗಿ ಆಗಬೇಕಿದೆ. ನಮ್ಮ ಪ್ರತೀ ಹಳ್ಳಿಗಳು ಹಾಗೂ ಪಟ್ಟಣಗಳಲ್ಲಿ ಮುಂಜಾಗ್ರತಾ ಕ್ರಮ ಅನಿವಾರ್ಯವಾಗಿ ಹಮ್ಮಿಕೊಳ್ಳಬೇಕಿದೆ.
ಡಾ. ಎ. ಪಿ. ಭಟ್ ಉಡುಪಿ