ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 37,593 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಅವುಗಳಲ್ಲಿ 24,296 ಪ್ರಕರಣ ಕೇರಳ ರಾಜ್ಯದಲ್ಲಿ ಪತ್ತೆಯಾಗಿರುವುದು ಕೇಂದ್ರ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಕೇರಳದಲ್ಲಿ, ಸತತವಾಗಿ ಕೆಲವು ವಾರಗಳಿಂದ ದೈನಂದಿನ ಪಾಸಿಟಿವ್ ಪ್ರಕರಣಗಳು ಇಪ್ಪತ್ತು ಸಾವಿರ ದಾಟುತ್ತಿರುವುದು ಸೋಂಕು ನಿಯಂತ್ರಣದಲ್ಲಿ ಕೇರಳ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂಬ ಕೂಗು ದೇಶಾದ್ಯಂತ ಕೇಳಿಬರುತ್ತಿದೆ. ಈ ರೀತಿ ಸೋಂಕು ಉಲ್ಬಣವಾಗುತ್ತಿರುವುದರಿಂದ ರಾಜ್ಯದ ಗಡಿ ಜಿಲ್ಲೆಗಳಾದ ಮೈಸೂರು, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿಯ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವುದನ್ನು ತಳ್ಳಿ ಹಾಕುವಂತಿಲ್ಲ.
ಅಕ್ಟೋಬರ್ ನಲ್ಲಿ ಕೊರೊನಾ ಮೂರನೆಯ ಅಲೆಯ ಅಬ್ಬರ ದೇಶಾದ್ಯಂತ ತೀವ್ರ ಸ್ವರೂಪ ಪಡೆಯಲಿದೆ ಎಂದು ಈಗಾಗಲೇ ತಜ್ಞರು ಕೇಂದ್ರ ಗೃಹ ಇಲಾಖೆಗೆ ಎಚ್ಚರಿಕೆಯನ್ನು ನೀಡಿದ್ದು, ಈ ರೀತಿ ಕೇರಳದಲ್ಲಿ ಸೋಂಕು ಉಲ್ಬಣವಾಗುವುದು ಮುಂದುವರಿದಲ್ಲಿ ಯಾರೂ ಊಹಿಸದ ಪರಿಸ್ಥಿತಿ ಎದುರಾಗುವ ಎಲ್ಲಾ ಸಾಧ್ಯತೆಗಳಿವೆ. ಆದ್ದರಿಂದ ಸರಕಾರ ಮುಂಜಾಗ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸುವುದು ಸದ್ಯದ ಅಗತ್ಯತೆಯಾಗಿದೆ.