ನವದೆಹಲಿ: ವಾಹನ ಗುಜರಿ ನೀತಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿದರು. ಗುಜರಾತ್ ನಲ್ಲಿ ಹೂಡಿಕೆದಾರರ ಸಮಾವೇಶವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಅಭಿವೃದ್ಧಿ ಪಯಣದಲ್ಲಿ ಈ ನೀತಿ ಮಹತ್ವದ ಮೈಲಿಗಲ್ಲು ಎಂದು ಹೇಳಿದ ಪ್ರಧಾನಿ, ಇದರಿಂದ ಆರ್ಥಿಕತೆಗೆ ಉತ್ತೇಜನ ನೀಡಿದಂತಾಗುತ್ತದೆ. ಹಳೆಯ ವಾಹನಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಈ ನೀತಿ ಸಹಕಾರಿಯಾಗಲಿದೆ. ಹೊಸ ನೀತಿಯು ಸಾವಿರಾರು ಹೊಸ ಉದ್ಯೋಗದ ಜೊತೆಗೆ ಸುಮಾರು 10 ಸಾವಿರ ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತನಾಡಿ, ಕೇಂದ್ರ ಮತ್ತು ರಾಜ್ಯಗಳ ಜಿಎಸ್‌ಟಿ ಸಂಗ್ರಹದಲ್ಲಿ 30 ರಿಂದ 40 ಸಾವಿರ ಕೋಟಿ ರೂಪಾಯಿಗಳನ್ನು ಸೇರಿಸುವ ಹೊಸ ನೀತಿಯನ್ನು ಅನುಸರಿಸಿ ಆಟೋಮೊಬೈಲ್ ಮಾರಾಟ ಹೆಚ್ಚಾಗುತ್ತದೆ. ಈ ನೀತಿಯ ಮೂಲಕ ಭಾರತವನ್ನು ಆಗ್ನೇಯ ಏಷ್ಯಾದ ಸ್ಕ್ರ್ಯಾಪಿಂಗ್ ಹಬ್ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.
ಏನಿದು ವಾಹನ ಗುಜರಿ ನೀತಿ?
* ಹಳೆಯ ವಾಹನವನ್ನು ಗುಜರಿಗೆ ಹಾಕುವಾಗ ಒಂದು ಪ್ರಮಾಣಪತ್ರವನ್ನು ಅದರ ಮಾಲಕನಿಗೆ ನೀಡಲಾಗುತ್ತದೆ.
* ಈ ಪ್ರಮಾಣಪತ್ರ ಇರುವವರು ಹೊಸ ವಾಹನವನ್ನು ಖರೀದಿಸುವಾಗ ಆ ವಾಹನಕ್ಕೆ ನೋಂದಣಿ ಶುಲ್ಕ ಕಟ್ಟುವ ಅಗತ್ಯವಿಲ್ಲ.
* ರಸ್ತೆ ತೆರಿಗೆಯಲ್ಲಿ ಕೂಡ ರಿಯಾಯಿತಿ ಸಿಗಲಿದೆ.
* ವಾಹನ ಮಾಲಕರಿಗೆ ಹಳೆಯ ವಾಹನಕ್ಕೆ ಸಂಬಂಧಿಸಿದಂತೆ ನಿರ್ವಹಣೆಗೆ ತಗಲುವ ವೆಚ್ಚ, ರಿಪೇರಿ ವೆಚ್ಚ ಮತ್ತು ಇಂಧನ ದಕ್ಷತೆಯ ಮೇಲಿನ ಹಣದ ಉಳಿತಾಯ ಆಗಲಿದೆ.