ಉಡುಪಿ: ಸಂಶೋಧನಾ ವಿನ್ಯಾಸ ಗುಣಮಟ್ಟದ ಸಂಶೋಧನೆಗೆ ಮಾರ್ಗದರ್ಶಿಯಾಗಿದೆ. ಶೈಕ್ಷಣಿಕ ಸಂಶೋಧನೆಯಲ್ಲಿ ಸಂಶೋಧಕನಿಗೆ ಸಂಶೋಧನಾ ವಿನ್ಯಾಸವನ್ನು ಸೂಕ್ತ ರೀತಿಯಲ್ಲಿ ರಚಿಸುವ ನೈಪುಣ್ಯತೆ ಇದ್ದಲ್ಲಿ ಗುಣಮಟ್ಟದ ಶೈಕ್ಷಣಿಕ ಸಂಶೋಧನೆ ಹೊರಬರಲು ಸಾಧ್ಯವಾಗುತ್ತದೆ. ಸಂಶೋಧಕನಲ್ಲಿ ಉದ್ದೇಶದ ಸ್ಪಷ್ಟತೆ ಇದ್ದಲ್ಲಿ ಹಾಗೂ ಸಂಶೋಧನಾ ಪ್ರಕ್ರಿಯೆಯ ಸ್ಪಷ್ಟತೆಯಿಂದ ಕ್ಷೇತ್ರಕಾರ್ಯದ ಮೂಲಕ ವಿವಿಧ ಅಂಶಗಳನ್ನು ಬೆಳಕಿಗೆ ತರಬಹುದಾಗಿದೆ. ಆ ಮೂಲಕ ಸಂಶೋಧನೆಯ ಆಶಯಗಳನ್ನು ಈಡೇರಿಸಲು ಹಾಗೂ ಸಂಶೋಧನೆಯಿಂದ ಹೊರಬಂದ ವಿಚಾರವನ್ನು ನಿರ್ಭೀತಿಯಿಂದ ಪ್ರಸ್ತುತಪಡಿಸಲು ಸಾಧ್ಯವಾಗುತ್ತದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಲೋಕೇಶ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಐ.ಕ್ಯೂ.ಎ.ಸಿ. ವತಿಯಿಂದ ನಡೆದ ‘ಸಂಶೋಧನೆಯಲ್ಲಿ ಉದ್ದೇಶಗಳ ಗುರುತಿಸುವಿಕೆ ಹಾಗೂ ಸಂಶೋಧನಾ ವಿನ್ಯಾಸದ ಅಭಿವೃದ್ಧಿ’ ಎಂಬ ಅಂತರ್ಜಾಲ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಣನಾಥ ಶೆಟ್ಟಿ ಎಕ್ಕಾರು ಅವರು, ಸಂಶೋಧಕನಿಗೆ ಬದ್ಧತೆ ಮುಖ್ಯ. ಯೋಜಿತ ಕ್ರಮದಲ್ಲಿ ಸಂಶೋಧನೆ ಕೈಗೆತ್ತಿಕೊಂಡಾಗ ಉತ್ತಮ ಫಲಿತಾಂಶ ಸಿಗಲು ಸಾಧ್ಯ ಎಂದರು.
ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಸುರೇಶ್ ರೈ ಕೆ. ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ತಿಮ್ಮಣ್ಣ ಜಿ. ಭಟ್ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಮೇವಿ ಮಿರಾಂದ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಉದಯ ಶೆಟ್ಟಿ ಕೆ ವಿಚಾರ ಸಂಕಿರಣವನ್ನು ಸಂಯೋಜಿಸಿ ನಿರೂಪಿಸಿದರು.