ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ವಿ ಸುನಿಲ್ ಕುಮಾರ್ ಅವರು ಬುಧವಾರ ಕನ್ನಡದ ಮೇರುನಟ ಡಾ. ರಾಜಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ನಂತರ ಪಾರ್ವತಮ್ಮ ರಾಜಕುಮಾರ್ ಅವರ ಸಮಾಧಿಗೂ ಗೌರವಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಡಾ. ಅಂಬರೀಶ್ ಅವರ ಸಮಾಧಿ ಸ್ಥಳಕ್ಕೆ ಕೂಡ ಭೇಟಿ ನೀಡಿದ ಸಚಿವ ವಿ ಸುನಿಲ್ ಕುಮಾರ್ ಅಂಬರೀಶ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಡಾ.ರಾಜಕುಮಾರ್ ಕನ್ನಡದ ದಿಗ್ಗಜ ನಟರಲ್ಲಿ ಒಬ್ಬರು. ಕನ್ನಡ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾದ ಅವರ ಸಮಾಧಿಗೆ ನಮನ ಸಲ್ಲಿಸುವುದರಿಂದ ಕನ್ನಡ ಮತ್ತು ಸಂಸ್ಕೃತಿ ಖಾತೆ ನಿಭಾಯಿಸಲು ಮತ್ತಷ್ಟು ಶಕ್ತಿ ಮತ್ತು ಹುರುಪು ಸಿಗುತ್ತದೆಂಬ ನಂಬಿಕೆ ನನ್ನದು ಎಂದರು. ಅಂಬರೀಶ್ ಅವರು ಸಹ ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಗೆ ಕಾರಣವಾದ ನಟ ಅವರಿಗೂ ಸಹ ಗೌರವ ಸಮರ್ಪಣೆ ಮಾಡಿದ್ದು ನನಗೆ ಸಂತಸ ತಂದಿದೆ ಎಂದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಕಲಾವಿದೆ ಮಾಳವಿಕಾ ಅವಿನಾಶ್, ರಂಗಕರ್ಮಿ ಬಿ. ವಿ ರಾಜಾರಾಮ್ ಮತ್ತು ಚಿನ್ನೇಗೌಡ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.