ನವದೆಹಲಿ: ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದೆ. ದೇಶಾದ್ಯಂತ ಹಾಕಿಯ ಅಲೆ ಎದ್ದಿರುವ ಬೆನ್ನಲ್ಲೇ, ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾಗಿರುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಕೇಂದ್ರ ಸರಕಾರ ಮರುನಾಮಕರಣ ಮಾಡಿದ್ದು, ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ದೇಶಾದ್ಯಂತ ಹಲವಾರು ಜನರು ಈ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಅವರ ಗೌರವಾರ್ಥ ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿದ್ದರು. ಜನರ ಭಾವನೆಯನ್ನು ಗೌರವಿಸಿ ಈ ಅತ್ಯುನ್ನತ ಪ್ರಶಸ್ತಿಗೆ ಮರುನಾಮಕರಣ ಮಾಡಲಾಗಿದೆ ಎಂದು ಹೇಳಿದರು.
ಕಂಚಿನ ಪದಕಕ್ಕಾಗಿ ಶುಕ್ರವಾರ ನಡೆದ ಒಲಿಂಪಿಕ್ಸ್ ಹಾಕಿ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಭಾರತೀಯ ವನಿತಾ ತಂಡ 3-4 ಅಂತರದಲ್ಲಿ ಪರಾಭವಗೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ವನಿತಾ ತಂಡದ ಎಲ್ಲ ಸದಸ್ಯರಿಗೆ ಕರೆ ಮಾಡಿ, ‘ಪದಕ ಸಿಗದಿದ್ದರೂ ಉತ್ತಮ ಪ್ರದರ್ಶನ ನೀಡಿದ್ದೀರಿ. ನಿಮ್ಮ ತಂಡ ದೇಶದ ಜನರಿಗೆ ಪ್ರೇರಣೆ ನೀಡಿದೆ’ ಎಂದು ಅಭಿನಂದಿಸಿದರು.