ಕುಂದಾಪುರ: ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದ ಕೈಲ್ಕೆರೆ ಪ್ರದೇಶದಲ್ಲಿ ವಿಜಯನಗರದ ಸಂಗಮ ದೊರೆ ಇಮ್ಮಡಿ ಹರಿಹರನ ಶಾಸನವನ್ನು ರಾಜೇಶ್ವರ ಉಪಾಧ್ಯಾಯ ಕಂಚಾರ್ತಿ ಅವರು ಪತ್ತೆ ಮಾಡಿರುತ್ತಾರೆ. ಈ ಶಾಸನವನ್ನು ಓದಿ ಅರ್ಥೈಸುವಲ್ಲಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಸಹಕಾರ ನೀಡಿರುತ್ತಾರೆ.
6 ಅಡಿ ಉದ್ದ ಹಾಗೂ 2.5 ಅಡಿ ಅಗಲದ ಕಣ ಶಿಲೆ (ಗ್ರಾನೈಟ್)ಯಲ್ಲಿ ಕೊರೆಯಲ್ಪಟ್ಟ ಈ ಶಾಸನವು 54 ಸಾಲುಗಳನ್ನು ಹೊಂದಿದ್ದು ಕನ್ನಡ ಲಿಪಿ ಹಾಗೂ ಕನ್ನಡ ಮತ್ತು ಸಂಸ್ಕೃತ ಭಾಷೆಯನ್ನು ಒಳಗೊಂಡಿದೆ. ‘ಶ್ರೀ ಗಣಾಧಿಪತಯೆ ನಮಃ’ ಎಂಬ ಶ್ಲೋಕದಿಂದ ಪ್ರಾರಂಭವಾಗುವ ಈ ಶಾಸನವು ಇಮ್ಮಡಿ ಹರಿಹರನು ವಿಜಯನಗರದಲ್ಲಿ ಆಳ್ವಿಕೆ ಮಾಡುತ್ತಿರುವ ಜಯಾಭ್ಯುದಯ ಶಕವರ್ಷ 1316 (ಕ್ರಿ.ಶ 1394, ನವಂಬರ್ 10 ಸೋಮವಾರ) ನೆಯ ಬಾವ ಸಂವತ್ಸರದ ಕಾರ್ತಿಕ ಶುದ್ಧ 10 ಸೋಮವಾರದಂದು ಭಾರದ್ವಾಜ ಗೋತ್ರದವರಾದ ನಾರಾಯಣ ವಾಜಪೇಯಯಾಜಿಗಳು ಮತ್ತು ನರಹರಿ ಸೋಮಯಾಜಿಗಳು ಹಾಗೂ ವಸಿಷ್ಠ ಗೋತ್ರದ ಪಂಡರಿ ದೀಕ್ಷಿತರುಗಳು ಪಂಪಾ ಕ್ಷೇತ್ರದ ಶ್ರೀ ವಿರೂಪಾಕ್ಷ ದೇವರ ಸನ್ನಿಧಿಯಲ್ಲಿ ಶಿವರಾತ್ರಿಯ ಪುಣ್ಯ ಕಾಲದಲ್ಲಿ ಸರ್ವಭಾದ ಪರಿಹಾರವಾಗಿ ರಾಯರ ಹೆಸರಲ್ಲಿ ಹಿರಾಣ್ಯೋದಕ ದಾನವನ್ನು ಮಾಡಿರುವ ವಿವರವಿದೆ.
ಶ್ರೀ ವೀರ ಹರಿಹರ ಮಹಾರಾಯರ ಆಳ್ವಿಕೆಯ ಈ ಕಾಲದಲ್ಲಿ ರಾಯರ ನಿರೂಪದಿಂದ ಬಾರಕೂರು ರಾಜ್ಯವನ್ನು ಕರಣಿಕ ಸಿಂಗಣ್ಣನ ತಮ್ಮ ಮಲ್ಲಪನು ಪ್ರತಿಪಾಲಿಸುತ್ತಿರುತ್ತಾನೆ. ಶ್ರೀ ವೀರ ಹರಿಹರ ಮಹಾರಾಯರಿಗೆ ಮಾಡಿದ ದಾನದ ಪ್ರತಿಫಲವಾಗಿ ಮಲ್ಲಪನು ಸಿಂಗೇರಿ (ಶೃಂಗೇರಿ)ಯ ಶ್ರೀ ವಿದ್ಯಾರಣ್ಯ ಶ್ರೀಪಾದಂಗಳ ಸನ್ನಿಧಿಯಲ್ಲಿ ಈ ಮೂವರು ವಿದ್ವಾನುಗಳಿಗೆ 130 ವರಹ ಗದ್ಯಾಣಗಳನ್ನು, 468 ಕಾಟಿ ಗದ್ಯಾಣಗಳನ್ನು, 1 ಪ್ರತಾಪ ಗದ್ಯಾಣವನ್ನು ಹಾಗೂ ಬಾರಕೂರಿನ ನಾಲ್ವತ್ತು ನಾಡೊಳಗಿನ ಭೂಮಿಗಳನ್ನು ಪ್ರಮುಖವಾಗಿ ಕವಿಲಕೇರಿ, ವೊಲಗತ್ತೂರು, ಕಂದಾಉರ, ಹೊನ್ನಹಳಡಿಯ (ಈಗಿನ ಕೈಲ್ಕೆರೆ ವಲ್ಕುತ್ತೂರು, ಕಂದಾವರ, ಹೊರ್ನಾಡಿ) ಭೂಮಿಯನ್ನು ದಾನವಾಗಿ ನೀಡಿರುವುದಕ್ಕೆ ಬರಸಿಕೊಟ್ಟ ಧರ್ಮಶಾಸನ ಇದಾಗಿದೆ.
ಶಾಸನದಲ್ಲಿ ಕಂಚಿಕಾ ದೇವಿ, ವೊಲಗತ್ತೂರ ದೇವಸ್ವ, ಬ್ರಹ್ಮರ ಬನದ ಉಲ್ಲೇಖಗಳಿವೆ ಹಾಗೆಯೇ ಚತುಸೀಮೆಯನ್ನು ಗುರುತಿಸುವಾಗ ಗದ್ದೆಗಳ ಮತ್ತು ವ್ಯಕ್ತಿಗಳ ಉಲ್ಲೇಖವನ್ನು ಮಾಡಲಾಗಿದೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವಿದ್ದು ಅದೇ ರೀತಿ ಶಾಸನವನ್ನು ರಕ್ಷಿಸಿದವರಿಗೆ ದೊರಕುವ ಮನ್ನಣೆಯನ್ನು ತಿಳಿಸಲಾಗಿದೆ. ಈ ಮೂವರು ವಿದ್ವಾನುಗಳು ತಮ್ಮ ಧರ್ಮವಾಗಿ ಹೊರಗಣ ಸೋಮಯ್ಯ ದೇವರಿಗೆ (ಈಗಿನ ವಲ್ಕುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯ?) ಮಹಾನವಮಿಯ ಪರ್ವಕ್ಕೆ ಮೂರು ಹಾಡ ಎಣ್ಣೆಯನ್ನು ಪ್ರತಿ ವರುಷದಲ್ಲೂ ನೀಡಬೇಕೆಂಬ ವಿವರವಿದೆ. ರಾಯರು ಕೊಟ್ಟ ಈ ಧರ್ಮದ ಹರವರಿಗಳಿಗೆ ಯಾವ ಕಂಟಕವೂ ಬಾರದ ಹಾಗೆ ಆ ಸೋಮಯ್ಯ ದೇವರ ಆರಾಧಕರು ಮತ್ತು ಮೂರು ಕೇರಿಯ ಹಲರು ಪಾಲಿಸಿಕೊಂಡು ಬರಬೇಕೆಂಬ ವಿವರವಿದೆ.
ಈ ಶಾಸನಕ್ಕೆ ಶ್ರೀ ವೀರ ಹರಿಹರ ಮಹಾರಾಯರ ಶ್ರೀ ಹಸ್ತವಾಗಿ ಮಲ್ಲಪಗಳು ಒಪ್ಪಿಗೆಯನ್ನು ಹಾಕಿರುತ್ತಾರೆ. ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಕೈಲ್ಕೆರೆಯ ವಿನಯ್ ಕೊಠಾರಿ ಮತ್ತು ರೋಶನ್ ಕೊಠಾರಿಯವರು ಸಹಕಾರ ನೀಡಿರುತ್ತಾರೆ.